ಬೆಂಗಳೂರು, ಮಾ.05 (DaijiworldNews/PY): ಬಿಗ್ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ಅವರ ನಿವಾಸದ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿದ್ದು, ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಡ್ರಗ್ಸ್ ಜಾಲದಲ್ಲಿ ಮಸ್ತಾನ್ ಶಾಮೀಲಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆ ಸಂಜಯ್ ನಗರದಲ್ಲಿರುವ ಮಸ್ತಾನ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಗೋವಿಂದಪುರ ಪೊಲಿಸರು ದಾಳಿ ನಡೆಸಿದ್ದು, ಬೆಳಗ್ಗೆ ಆರು ಗಂಟೆಗೆ ಬಾಣಸವಾಡಿ ಎಸಿಪಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಮಸ್ತಾನ್ ಚಂದ್ರ ಅವರು ನಿರ್ದೇಶಕ, ನಟ ಎಂದು ಗುರುತಿಸಿಕೊಂಡಿದ್ದು, ಸಿತಾರ ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಇವರು ಡ್ರಗ್ಸ್ ಜಾಲದಲ್ಲಿ ಶಾಮೀಲಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇತ್ತೀಚೆಗೆ ಬಂಧನಕ್ಕೆ ಒಳಗಾಗಿರುವ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ನೊಂದಿಗೆ ಮಸ್ತಾನ್ ಸಂಪರ್ಕದಲ್ಲಿದ್ದ. ಸಿಸಿಬಿ ಪೊಲೀಸರು ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಅನ್ನು ಬಂಧಿಸಿದ್ದರು. ವಿಚಾರಣೆಯ ವೇಳೆ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್, ಕೇಶವ್ ಹಾಗೂ ಮಸ್ತಾನ್ ಚಂದ್ರ ತನ್ನೊಂದಿಗೆ ಸಂಪರ್ಕದಲ್ಲಿದ್ದು, ಡ್ರಗ್ ಪೂರೈಸುತ್ತಿದ್ದೆ ಎಂದು ತಿಳಿಸಿದ್ದಾನೆ. ಈ ಬಗ್ಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದ ಪೊಲೀಸರು, ಮಸ್ತಾನ್ ಹಾಗೂ ಕೇಶವ್ ಮನೆ ಮೇಲೆ ದಾಳಿ ನಡೆಸಿದ್ದಾರೆ.
"ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ನ ಬಂಧನದ ಸಂದರ್ಭ ದೊರೆತ ತಾಂತ್ರಿಕ ಸಾಕ್ಷಾಧಾರಗಳ ಹಿನ್ನೆಲೆ ಮಸ್ತಾನ್ ಚಂದ್ರ ಹಾಗೂ ಕೇಶವ್ ಮನೆ ಮೇಲೆ ದಾಳಿ ನಡೆದಿದೆ" ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ. ಮಸ್ತಾನ್ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು, ವಶಕ್ಕೆ ಪಡೆದು ವಿಚಾರಣೆ ಪ್ರಾರಂಭಿಸಿದ್ದಾರೆ.