ನವದೆಹಲಿ, ಮಾ 05 (DaijiworldNews/MS): ರಾಷ್ಟ್ರ ರಾಜಧಾನಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷಿತ ಸಂಸತ್ ಭವನದಿಂದ, ಇನ್ನು ಜನರಿಗೆ ರಸ್ತೆಯಲ್ಲಿ ವಿವಿಐಪಿಗಳ ಓಡಾಟದಿಂದ ಉಂಟಾಗುವ ಕಿರಿಕಿರಿ ತಪ್ಪಲಿದೆ. ಯಾಕೆಂದರೆ ಸಂಸತ್ ಭವನ ಮೂರು ಸುರಂಗಗಳನ್ನು ನಿರ್ಮಿಸಲಾಗುತ್ತಿದ್ದು ಇವು ಪ್ರಧಾನಿ ನಿವಾಸ, ಉಪ ರಾಷ್ಟ್ರಪತಿ ನಿವಾಸ, ಸಂಸದರ ಚೇಂಬರ್ ತೆರಳಲು ಮಾರ್ಗವಾಗಲಿವೆ.
ಅಧಿವೇಶನದ ವೇಳೆ ಮತ್ತು ಇತರೆ ಸಮಯಗಳಲ್ಲಿ ಅತಿಗಣ್ಯರ ಸಂಚಾರದ ವೇಳೆ ವಾಹನ ಸಂಚಾರದ ಮೇಲೆ ಕೆಲ ಕಾಲ ನಿರ್ಬಂಧ ವಿಧಿಸಲಾಗುತದೆ. ಇನ್ನು ಕೆಲವು ಸಮಯದಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ಜನಪ್ರತಿನಿಧಿಗಳು ಕೂಡಾ ಸಂಕಷ್ಟಎದುರಿಸಬೇಕಾಗಿ ಬರುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು ಮೂರು ಪ್ರತ್ಯೇಕ ಸುರಂಗ ಮಾರ್ಗ ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ. ಈ ಸುರಂಗ ಏಕಮಾರ್ಗವಾಗಿ ಅಷ್ಟೇನೂ ದೊಡ್ಡದಾಗಿ ಇರುವುದಿಲ್ಲ. ಈ ಮಾರ್ಗಗಳಲ್ಲಿ ಕೇವಲ ವಿವಿಐಪಿಗಳಷ್ಟೇ ಓಡಾಡುತ್ತಾರೆ. ಇದಕ್ಕಾಗಿ ಗಾಲ್ಫ್ ಕಾರ್ಟ್ನಂಥ ವಾಹನ ಬಳಕೆ ಮಾಡಲಾಗುತ್ತದೆ.
ಈಗಿರುವ ಯೋಜನೆ ಪ್ರಕಾರ, ಪ್ರಧಾನಿಯವರ ನೂತನ ನಿವಾಸ ಮತ್ತು ಕಾರ್ಯಾಲಯವು ಸೌತ್ ಬ್ಲಾಕ್ ಕಡೆ ಇರಲಿದೆ. ಉಪರಾಷ್ಟ್ರಪತಿಗಳ ಹೊಸ ನಿವಾಸ ನಾರ್ತ್ ಬ್ಲಾಕ್ ಕಡೆ ತಲೆಎತ್ತಲಿದೆ. ಸಂಸದರ ಚೇಂಬರ್ಗಳ ಕಟ್ಟಡವು ಹಾಲಿ ಸಾರಿಗೆ ಮತ್ತು ಶ್ರಮ ಶಕ್ತಿ ಭವನವಿರುವ ಕಡೆಯಲ್ಲಿ ನಿರ್ಮಾಣವಾಗಲಿದೆ. ಹೀಗಾಗಿ ಇವುಗಳ ಸಂಪರ್ಕಕ್ಕೆ ಮೂರು ಸುರಂಗಗಳನ್ನು ನಿರ್ಮಿಸಲಾಗುವುದು ಎಂದು ತಿಳಿದುಬಂದಿದೆ.
ನೂತನ ಸಂಸತ್ ಭವನವನ್ನು 862 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿದ್ದು, ಆಗಲೇ ಈ ಕಟ್ಟಡದ ಉದ್ಘಾಟನೆ ನೆರವೇರಿಸಲು ಯೋಜನೆ ರೂಪಿಸಲಾಗಿದೆ.