ಕೊಚ್ಚಿ, ಮಾ.05 (DaijiworldNews/MB): ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇ. ಶೀಧರನ್ ಅವರು ಎಂದು ಬಿಜೆಪಿ ಗುರುವಾರ ಘೋಷಣೆ ಮಾಡಿತ್ತು. ಈ ಬಗ್ಗೆ ಗುರುವಾರ ಹೇಳಿಕೆ ನೀಡಿದ್ದ ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್, ಮೆಟ್ರೋ ಮ್ಯಾನ್' ಎಂದೂ ಕರೆಯಲ್ಪಡುವ ಇ.ಶ್ರೀಧರನ್ ಅವರು ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿದ್ದರು. ಹಾಗೆಯೇ ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳೀಧರನ್ ಕೂಡಾ ಇದನ್ನೇ ಹೇಳಿದ್ದರು. ಆದರೆ ಬಿಜೆಪಿಯು ಬಳಿಕ ಯೂಟರ್ನ್ ಹೊಡೆದಿದೆ.
ಈ ಸುದ್ದಿಯು ಎಲ್ಲಾ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ರಾಷ್ಟ್ರೀಯ ಪಕ್ಷ ಬಿಜೆಪಿಯು, ''ನಾವು ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ'' ಎಂದು ಹೇಳಿದೆ. ಬಿಜೆಪಿಯ ವಿಜಯ ಯಾತ್ರೆ ನೇತೃತ್ವ ವಹಿಸಿರುವ ಸುರೇಂದ್ರನ್ ಅವರು ಗುರುವಾರ ತಿರುವಲ್ಲಾದಲ್ಲಿ ಮಾತನಾಡಿ, ''ಕೊಂಕಣ ರೈಲ್ವೆ ಮತ್ತು ದೆಹಲಿ ಮೆಟ್ರೋ ರೈಲು ಒಳಗೊಂಡಂತೆ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಶ್ರೀಧರನ್ ಅವರನ್ನು ಕೇರಳದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಪಕ್ಷ ಆಯ್ಕೆ ಮಾಡಿದೆ'' ಎಂದು ಹೇಳಿದ್ದರು. ಹಾಗೆಯೇ ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳೀಧರನ್ ಅವರು ಟ್ವೀಟ್ ಮಾಡಿ, ''ಇ ಶ್ರೀಧರನ್ ಅವರ ನೇತೃತ್ವದಲ್ಲಿ ಬಿಜೆಪಿ ಕೇರಳದಲ್ಲಿ ಬಿಜೆಪಿ ಕಣಕ್ಕಿಳಿಯಲಿದೆ. ಅವರು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ'' ಎಂದಿದ್ದರು.
ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಯೂಟರ್ನ್ ಹೊಡೆದಿರುವ ಅವರು, ''ಪಕ್ಷವು ಇ.ಶ್ರೀಧರನ್ ಅವರನ್ನು ಕೇರಳ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದೆ ಎಂದು ನಾನು ಮಾಧ್ಯಮ ವರದಿಗಳ ಮೂಲಕತಿಳಿದುಕೊಂಡೆ. ನಂತರ, ಪಕ್ಷದ ಮುಖ್ಯಸ್ಥರೊಂದಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆದಿದ್ದು ಪಕ್ಷದ ಮುಖ್ಯಸ್ಥರು ಇಂತಹ ಯಾವುದೇ ಘೋಷಣೆ ಮಾಡಿಲ್ಲ'' ಎಂದು ಹೇಳಿರುವುದಾಗಿ ವಿ. ಮುರಳೀಧರನ್ ಹೇಳಿದ್ದಾರೆ.
ಬಿಜೆಪಿಯಲ್ಲೇ ಇಂತಹ ಗೊಂದಲ ಇರುವುದನ್ನು ಗಮನಿಸಿರುವ ವಿಪಕ್ಷಗಳು ಬಿಜೆಪಿಯ ಕಾಲೆಳೆಯಲು ಆರಂಭಿಸಿದೆ. ''ಬಿಜೆಪಿಯು ಇನ್ನೂ ನಿರ್ಮಾಣವೇ ಆಗಿರದ ಕಟ್ಟಡದಲ್ಲಿ ಯಾರೂ ವಾಸಿಸುತ್ತಾರೆ ಎಂಬುದರಲ್ಲಿ ಗೊಂದಲಕ್ಕೆ ಒಳಗಾಗಿದ್ದಾರೆ. ಕೇರಳದಲ್ಲಿ ಬಿಜೆಪಿ ಸಿಎಂ ಇರುವುದಿಲ್ಲ'' ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಲೇವಡಿ ಮಾಡಿದ್ದಾರೆ.