ಚಿಕ್ಕಮಗಳೂರು, ಮಾ 05 (DaijiworldNews/MS): ತಂದೆಯ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ಆತನ ಅಪ್ರಾಪ್ತೆ ಪುತ್ರಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಮಹೇಶ್ ಎಂಬಾತನನ್ನು ಬಂಧಿಸಲಾಗಿದೆ.
ಆರೋಪಿ ಮಹೇಶ್ 7 ತಿಂಗಳ ಹಿಂದೆ ಬಾಲಕಿಯ ತಂದೆಯ ಬಳಿ ಹಿಟಾಚಿ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಕೆಲಸಕ್ಕೆ ಬರುವ ಸಂದರ್ಭ ಮಗಳ ಜತೆ ಮೊಬೈಲ್ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ ಮಾಲಕರು ಮಾತಾಡದಂತೆ ಆತನಿಗೆ ಎಚ್ಚರಿಕೆ ನೀಡಿ ಕೆಲಸದಿಂದ ತೆಗೆದುಹಾಕಿದ್ದರು.
ಇದೇ ಕೋಪದಿಂದ ಫೆಬ್ರವರಿ 26ರಂದು ಬಾಲಕಿಯನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಆಕೆಯ ಶಾಲೆಯ ಬಳಿ ಬಂದು ಕಳಸ ಸಮೀಪದ ಹೋಮ್ ಸ್ಟೇ ಒಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ.
ಈತ ಕುಡಿವ ನೀರಿನಲ್ಲಿ ಬಾಲಕಿಗೆ ಅಮಲು ಬರುವ ಪುಡಿಯನ್ನು ಬೆರೆಸಿ ಅತ್ಯಾಚಾರವೆಸಗಿದ್ದಾನೆ ಎಂದು ಪೋಷಕರು ದೂರಿದ್ದು, ವೈದ್ಯಕೀಯ ಪರೀಕ್ಷೆಯಿಂದ ಇದು ಸ್ಪಷ್ಟವಾಗಬೇಕಿದೆ. ಬಾಲಕಿ ರಾತ್ರಿ ತಡವಾಗಿ ಮನೆಗೆ ಬಂದಿದ್ದಲ್ಲದೆ ಅಸಹಜವಾಗಿರುವುದನ್ನು ಕಂಡ ಪೋಷಕರು ವಿಚಾರಿಸಿದಾಗ ನಡೆದ ಘಟನೆಯನ್ನು ಹೇಳಿದ್ದು ಪೋಷಕರು, ಪೊಲೀಸರು ದೂರು ದಾಖಲಿಸಿದ್ದಾರೆ.