ಬೆಂಗಳೂರು, ಮಾ. 04 (DaijiworldNews/SM): ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಪೊಲೀಸರು ರಸ್ತೆ, ಹೆದ್ದಾರಿಗಳಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವುದು ತೀವ್ರವಾಗಿದೆ. ಈ ವಿಚಾರವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್ ಗೌಡ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಪೊಲೀಸರು ರಸ್ತೆ ಮಧ್ಯ ಓಡಿಬಂದು ವಾಹನ ಸವಾರರನ್ನು ಹಿಡಿಯುತ್ತಾರೆ ಇದರಿಂದ ಅಪಘಾತಗಳು ಹೆಚ್ಚಾಗುತ್ತವೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, ಸಿಗ್ನಲ್ ಜಂಪ್, ಅತಿ ವೇಗದ ಚಾಲನೆ ಪತ್ತೆ ಮಾಡಿ ದಂಡ ಹಾಕಲು ನಮ್ಮಲ್ಲಿ ತಂತ್ರಜ್ಞಾನ ಇದೆ. ಎಲ್ಲಾ ಕಡೆಗಳಲ್ಲಿ ಈ ತಂತ್ರಜ್ಞಾನ ಬಳಸಲು ಸಾಧ್ಯವಾಗುತ್ತಿಲ್ಲ. ಅಪರಾಧ ನಡೆದ ಸಂದರ್ಭ ಅವರನ್ನು ಹಿಡಿಯುವುದು ಅನಿವಾರ್ಯತೆ ಪೊಲೀಸರು ಹೊಂದಿದ್ದಾರೆ. ಈ ಹಿನ್ನೆಲೆ ರಸ್ತೆಯಲ್ಲಿ ಅಡ್ಡಹಾಕಿ ಪರಿಶೀಲನೆ ನಡೆಸುವುದು ಅನಿವಾರ್ಯವಾಗಿದೆ. ಈ ವೇಳೆ ಅಪಘಾತಗಳಾಗದಂತೆ ಎಚ್ಚರ ವಹಿಸಲು ಇಲಾಖೆಗೆ ಸೂಚಿಸಲಾಗುವುದೆಂದರು.