ಬೆಂಗಳೂರು, ಮಾ. 04 (DaijiworldNews/SM): ಅಭಿವೃದ್ಧಿ ಕಾರ್ಯಗಳಿಗೆ 'ಒಂದು ದೇಶ, ಒಂದು ಚುನಾವಣೆ' ಪೂರಕವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ದಿನ ಮಾತನಾಡಿದ ಅವರು, 'ಒಂದು ದೇಶ, ಒಂದು ಚುನಾವಣೆಯಿಂದ ಆಡಳಿತ ಯಂತ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ. ಅಲ್ಪ ಮಟ್ಟಿಗೆ ಚುನಾವಣೆಯಿಂದ ಬದಲಾವಣೆಗಳಾಗಬಹುದು. ಆದರೆ, ಅಭಿವೃದ್ಧಿಯ ದೃಷ್ಠಿಯಲ್ಲಿ ಗಮನಿಸಿದ್ದಲ್ಲಿ ಹೆಚ್ಚಿನ ಲಾಭವಾಗಲಿದೆ ಎಂದರು.
ಒಂದು ದೇಶ ಒಂದು ಚುನಾವಣೆ ಎಂಬುದು ಪ್ರಗತಿಪರ ಆಲೋಚನೆಯಾಗಿದೆ. ಈ ಬಗ್ಗೆ ವ್ಯಾಪಕ ಚರ್ಚೆ ನಡೆದು ಭಾರತದಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಯುವ ಪದ್ಧತಿ ಅನುಷ್ಠಾನಕ್ಕೆ ಬರಲಿ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಅನಗತ್ಯ ಖರ್ಚು, ವೆಚ್ಚಗಳು ಮತ್ತು ಸಮಯದ ಉಳಿತಾಯ ಇದರಿಂದ ಸಾಧ್ಯವಾಗಲಿದೆ. ಎಲ್ಲಾ ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರಗಳು ಸಂಸತ್ತಿನ ಉಭಯ ಸದನಗಳಲ್ಲಿ ಹಾಗೂ ರಾಜ್ಯದ ವಿಧಾನಮಂಡಲಗಳಲ್ಲಿ ಚಿಂತನ-ಮಂಥನ ನಡೆಸಿದರೆ ಮಾತ್ರ ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.