National
ಲಂಚ ಕೇಳಿದ ಸಿಟ್ಟಲ್ಲಿ ಬೆಂಗಳೂರಿನ ಎಸಿಪಿ ಕಚೇರಿಯಿಂದ ಕುರ್ಚಿ ಕದ್ದ ಜಪಾನ್ ಪ್ರಜೆ.!
- Thu, Mar 04 2021 05:45:09 PM
-
ಬೆಂಗಳೂರು, ಮಾ.04 (DaijiworldNews/MB): ಅಧಿಕಾರಿಗಳು ಲಂಚ ಕೇಳಿದ್ದಕ್ಕೆ 31 ವರ್ಷದ ಜಪಾನ್ ಪ್ರಜೆಯೊಬ್ಬರು ಕಳೆದ ಶನಿವಾರ ಬೆಂಗಳೂರಿನ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಜೆಸಿ ನಗರ ಕಚೇರಿಯಿಂದ ಕುರ್ಚಿಯನ್ನು ಕದ್ದಿದ್ದಾರೆ.
2019 ರಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದ ಹಿರೋಟೊಶಿ ತನಕಾ, ತಾನು ಕುರ್ಚಿ ಕದ್ದ ಕಾರಣಕ್ಕೆ ಪೊಲೀಸರು ತನ್ನ ವಿರುದ್ದ ದೂರು ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದ 2019 ರ ಪ್ರಕರಣಕ್ಕೆ ಸಂಬಂಧಿಸಿ ನಾನು ಭಾರತದಲ್ಲಿಯೇ ಉಳಿದು ನ್ಯಾಯವನ್ನು ಪಡೆಯಲು ಬಯಸುತ್ತೇನೆ'' ಎಂದು ಹೇಳಿದ್ದಾರೆ.
ತನ್ನ ಇಂಗ್ಲಿಷ್ ಕೋಚಿಂಗ್ ಕೇಂದ್ರದ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ವಿಚಾರದಲ್ಲಿ ಹಿರೋಟೊಶಿ ತನಕಾ ವಿರುದ್ದ ಈ ಹಿಂದೆ ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಳಿಕ ಎರಡೂ ಕಡೆಯವರು ಮಾತನಾಡಿ ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಂಡಿದ್ದರು.
''ನಾನು ಲಿಖಿತ ಕ್ಷಮೆಯಾಚಿಸಲು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು ಆದರೆ ಒಂದು ವಾರದ ನಂತರ ಬರುವಂತೆ ಹೇಳಿದರು. ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಾನು ಒಂದು ರಾತ್ರಿ ಪೊಲೀಸ್ ಠಾಣೆಯಲ್ಲಿ ಮತ್ತು ಇನ್ನೂ 19 ದಿನಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದೇನೆ'' ಎಂದು ಜಾಮೀನಿನ ಮೇಲೆ ಹೊರಕ್ಕೆ ಬಂದಿರುವ ತನಕಾ ಹೇಳಿದ್ದಾರೆ.
''ನಾನು ಇಂಗ್ಲಿಷ್ ಕೋಚಿಂಗ್ ಕೇಂದ್ರಕ್ಕೆ ಸೇರಿದ ನಂತರ, ಪ್ರಾಂಶುಪಾಲರು ಕೇಂದ್ರದ ಪ್ರಚಾರಕ್ಕಾಗಿ ಕೆಲಸ ಮಾಡಲು ಕೇಳಿಕೊಂಡರು. ನಂತರ ಅವರು ನನ್ನ ಸಂಬಳವನ್ನು ನಿಗದಿಪಡಿಸಿದರು. ನಾನು ಒಳ್ಳೆಯ ಸಂಬಳವನ್ನು ನಿರೀಕ್ಷಿಸಿರಲಿಲ್ಲ, ಆದರೆ ಕಷ್ಟಪಟ್ಟು, ಸರಿಯಾಗಿ ಕೆಲಸ ಮಾಡಿದೆ. ನಂತರ ನಾನು ಅವರಲ್ಲಿ ಸಂಬಳ ಕೇಳಿದೆ. ಆರು ದಿನಗಳವರೆಗೆ ಕೇಳುತ್ತಲೇ ಇದ್ದೆ. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ನನ್ನನ್ನು ಕಡೆಗಣಿಸಿದರು. ಬಳಿಕ ನಾನು ಅವರನ್ನು ನವೆಂಬರ್ 13, 2019 ರಂದು ಭೇಟಿಯಾದೆ. ಈ ವೇಳೆ ವಾಗ್ವಾದ ನಡೆದಿದ್ದು ಅವರು, 'ನೀನು ನನ್ನನ್ನು ಮುಟ್ಟಿದರೆ ಬೆಂಗಳೂರಿನಲ್ಲೇ ಇರುವುದಿಲ್ಲ' ಎಂದು ಹೇಳಿದರು. ಅವರ ಆ ಮಾತಿನಿಂದ ಕೋಪಗೊಂಡ ನಾನು ಅವರಿಗೆ ಹೊಡೆದೆ'' ಎಂದು ಹೇಳಿದ್ದಾರೆ.
''ಈ ಕಾರಣಕ್ಕೆ ಇಂಗ್ಲಿಷ್ ಕೋಚಿಂಗ್ ಕೇಂದ್ರದ ಪ್ರಾಂಶುಪಾಲರು ನನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ನನ್ನನ್ನು ಪೊಲೀಸ್ ಠಾಣೆಗೆ ಕರೆಸಿದರು. ಬಳಿಕ ಕ್ಷಮೆಯಾಚನೆಯ ಪತ್ರ ಬರೆಯಲು ಹೇಳಿದರು. ಆದರೆ ಈ ಇಂಗ್ಲಿಷ್ ಕೋಚಿಂಗ್ ಕೇಂದ್ರ ಅಕ್ರಮದ್ದು ಎಂದು ತಿಳಿದ ಬಳಿಕ ನಾನು ಪ್ರಾಂಶುಪಾಲರಿಗೆ ನನ್ನ ಬೋಧನಾ ಶುಲ್ಕವನ್ನು ಹಿಂದಿರುಗಿಸಲು ಹೇಳಿದೆ. ಆದರೆ ಈ ವಿಷಯವನ್ನು ಬಗೆಹರಿಸಲು ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದರು. ಆದರೆ ನನ್ನನ್ನು ಇದ್ದಕ್ಕಿದ್ದಂತೆ ಬಂಧಿಸಲಾಯಿತು. ನನ್ನ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಯಿತು. ನವೆಂಬರ್ 2, 2020 ರಂದು ಹೈಕೋರ್ಟ್ ಈ ಪ್ರಕರಣವನ್ನು ರದ್ದುಪಡಿಸಿತು'' ಎಂದು ವಿವರಿಸಿದ್ದಾರೆ.
ನಂತರ ಜಪಾನಿಯರು ರಾಜ್ಯ ಮಾನವ ಹಕ್ಕುಗಳ ಸಮಿತಿಯನ್ನು ಸಂಪರ್ಕಿಸಿ, ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಕೋರಿದರು.
''ಆರ್ಟಿ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಅವರು 2019 ರ ಡಿಸೆಂಬರ್ನಲ್ಲಿ ಬಿಡುಗಡೆಯಾದ ದಿನ 1,500 ರೂ.ಗಳನ್ನು ನೀಡಿದ್ದರು. ಬಳಿಕ ನಾನು ಅವನ್ನು ಹಿಂದಿರುಗಿಸಿದ್ದೆ. ನನ್ನ ಬಳಿ ಹಣವಿಲ್ಲದೆ ಉದ್ಯಾನವನಗಳಲ್ಲಿ ಮಲಗಿದ್ದೆ. ಕಳೆದ ವರ್ಷ ಮಾರ್ಚ್ನಲ್ಲಿ ಉದ್ಯಾನವನದಲ್ಲಿ ನನ್ನ ಬ್ಯಾಗ್ ಕೂಡಾ ಕಳವು ಆಗಿದೆ. ಕೆಲವು ಪೊಲೀಸರು ನನಗೆ ಆಹಾರಕ್ಕೆ ಸಹಾಯ ಮಾಡಿದರು'' ಎನ್ನುತ್ತಾರೆ ತನಕಾ.
''ಜೈಲಿನಿಂದ ಬಿಡುಗಡೆಯಾಗುವ ಮೊದಲು ನಾನು ಪೊಲೀಸರಿಗೆ ಲಂಚ ನೀಡಲಿಲ್ಲ. ನಾನು ಜಾಮೀನಿನ ಮೇಲೆ ಹೊರಬಂದ ನಂತರ, ಆರ್.ಟಿ.ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ನನ್ನ ಬ್ಯಾಗ್ನ್ನು ಹಿಂದಿರುಗಿಸಬೇಕಾದರೆ 8,500 ರೂ. ಲಂಚಕ್ಕಾಗಿ ಒತ್ತಾಯಿಸಿದರು. ನನ್ನನ್ನು ಬಂಧಿಸುವುದಕ್ಕೂ ಮುನ್ನ ಪೊಲೀಸರು ಇಂಗ್ಲಿಷ್ ಕೋಚಿಂಗ್ ಕೇಂದ್ರದ ಪ್ರಾಂಶುಪಾಲರಿಂದ ಲಂಚ ಪಡೆದಿದ್ದರು'' ಎಂದು ತನಕಾ ದೂರುತ್ತಾರೆ.
ಜಪಾನ್ನ ಶಿಜುವಾಕಾ ಪ್ರಾಂತ್ಯದ ಯೈಜು ನಗರದ ಸೈಕಾಲಜಿ ಪದವೀಧರರಾದ ತನಕಾ ಕಳೆದ ತಿಂಗಳು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ''ವಿಚಾರಣೆಯನ್ನು ನಿಗದಿಪಡಿಸಲಾಗಿದೆ ಆದರೆ ಬೆಂಗಳೂರು ನಗರ ಪೊಲೀಸರು ನನ್ನ ಪ್ರಕರಣದ ಬಗ್ಗೆ ವರದಿಯನ್ನು ಕಳುಹಿಸದ ಕಾರಣ ಮುಂದೂಡಬೇಕಾಯಿತು'' ಎಂದು ತನಕಾ ಹೇಳುತ್ತಾರೆ.
''ತನ್ನಿಂದ ಲಂಚ ಪಡೆದ ಅಧಿಕಾರಿಗಳಿಗೆ ಆಯೋಗವು ಶಿಕ್ಷೆ ವಿಧಿಸುವುದನ್ನು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ. ಅದಕ್ಕಾಗಿ ನಾನು ಅಪರಾಧ ಮಾಡಿ ಜೈಲಿನಲ್ಲಿರಬೇಕಾಗುತ್ತದೆ. ಹಾಗಾಗಿ ನಾನು ಕುರ್ಚಿಯನ್ನು ಕದ್ದಿದ್ದೇನೆ, ಇದರಿಂದಾಗಿ ನಾನು ಅಧಿಕಾರಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸಬಹುದು. ನಾನು ಹಿಂತಿರುಗುವ ಮೊದಲು ಅವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದನ್ನು ತಿಳಿಯಬಹುದು. ನನ್ನ ಪುಸ್ತಕಗಳು ಮತ್ತು ಔಷಧಿಗಳು ಇದೆ. ನಾನು ಜೈಲಿನಲ್ಲಿರಬಹುದು. ತೊಂದರೆ ಇಲ್ಲ'' ಎಂದು ಕೂಡಾ ಹೇಳುತ್ತಾರೆ ತನಕಾ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ, ''ತನಕಾ ಕೆಲವು ಆರೋಪಗಳನ್ನು ಮಾಡಿ ನಮಗೆ ಮನವಿ ಕಳುಹಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ, ಜೆಸಿ ನಗರ, ಅವರು ಹಾಜರಾಗುವಂತೆ ಇಮೇಲ್ ಕಳುಹಿಸಿದ್ದಾರೆ. ಆದರೆ ತನಕಾ ಹಾಜರಾಗಿಲ್ಲ'' ಎಂದು ಹೇಳಿದ್ದಾರೆ.
ಇನ್ನು ಎಸಿಪಿ ಕಚೇರಿಯಿಂದ ಕುರ್ಚಿಯನ್ನು ಕದ್ದಿದ್ದಕ್ಕಾಗಿ ಜಪಾನಿ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ''ನಾವು ಅವರ ವಿರುದ್ಧ ಆರೋಪಗಳನ್ನು ಹೇರದಿರುವುದಕ್ಕೆ ಕಾರಣ ಅವರು ಈಗಾಗಲೇ ಪಾಸ್ಪೋರ್ಟ್ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಎಫ್ಆರ್ಆರ್ಒ ಅವರಿಗೆ ತನ್ನ ದೇಶಕ್ಕೆ ಹಿಂತಿರುಗಲು ಫೆಬ್ರವರಿ 28 ರವರೆಗೆ ಸಮಯವನ್ನು ನೀಡಿತ್ತು. ಆದರೆ ಅವರು ಹಿಂದಿರುಗಿಲ್ಲ'' ಎಂದು ಹೇಳಿದ್ದಾರೆ.
"ಜಪಾನಿನ ದೂತಾವಾಸವು ಆತನನ್ನು ಹಿಂತಿರುಗಲು ವಿನಂತಿಸಿದೆ. ಆದರೆ ಆತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರಿಗೂ ಆತನ ಮೇಲಿನ ಭರವಸೆ ಹೋಗಿದೆ ಎಂದು ತೋರುತ್ತದೆ'' ಎಂದು ಅಧಿಕಾರಿಗಳು ಹೇಳಿದ್ದಾರೆ.