ಬೆಂಗಳೂರು, ಮಾ.04 (DaijiworldNews/PY): "ನಾವು ಸದನದಲ್ಲಿ ಬೆತ್ತಲೆ ಆಗಿರುವುದನ್ನು ಕಂಡಿದ್ದೇವೆ. ಗೂಳಿಹಟ್ಟಿ ಶೇಖರ್ ಅವರು ಏನು ಮಾಡಿದ್ದಾರೆ ಎನ್ನುವುದನ್ನು ನೋಡಿದ್ದೇವೆ. ಭದ್ರಾವತಿಯ ಶಾಸಕ ಬಿ.ಕೆ ಸಂಗಮೇಶ್ ಅವರನ್ನು ಕಾನೂನು ಬಾಹಿರವಾಗಿ ಅಮಾನತು ಮಾಡಲಾಗಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಂಗಮೇಶ್ ಅವರನ್ನು ಸದನದೊಳಕ್ಕೆ ಬಿಡದಿದ್ದ ಕಾರಣ ಗರಂ ಆದ ಸಿದ್ದರಾಮಯ್ಯ, "ಸಂಗಮೇಶ್ ಅವರ ಕುಟುಂಬಸ್ಥರ ವಿರುದ್ದ ದೂರು ದಾಖಲಾಗಿದೆ. ಹಾಗಾಗಿ ಅವರು ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡಿದ್ದಾರೆ. ಅಮಾನತನ್ನು ವಾಪಾಸ್ ಪಡೆಯಬೇಕು" ಎಂದು ಆಗ್ರಹಿಸಿದ್ದಾರೆ.
"ಕಾನೂನು ಬಾಹಿರವಾಗಿ ಸಂಗಮೇಶ್ ಅವರನ್ನು ಅಮಾನತು ಮಾಡಲಾಗಿದೆ. ಅವರನ್ನು ಅಮಾನತು ಮಾಡುವುದಾದರೆ ನಮ್ಮೆಲ್ಲರನ್ನೂ ಕೂಡಾ ಅಮಾನತು ಮಾಡಿ" ಎಂದು ಹೇಳಿದ್ದಾರೆ.
ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿಕ್ರಿಯೆ ನೀಡಿದ್ದು, "ಸದನದಲ್ಲಿ ಅಂಗಿ ಬಿಚ್ಚುವುದು ಸೂಕ್ತವಲ್ಲ. ಸಂಗಮೇಶ್ ಅವರ ಬೇಜಾವಾಬ್ದಾರಿಯಿಂದ ವರ್ತಿಸಿದ್ದಾರೆ. ಅವರಿಗೆ ಬೆಂಬಲ ನೀಡುವುದು ಸರಿಯಲ್ಲ" ಎಂದಿದ್ದಾರೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಅವರು ಸ್ಪೀಕರ್ ನಡೆಗೆ ಬೆಂಬಲ ಸೂಚಿಸಿದ್ದು, "ಇದನ್ನು ದೇಶದ ಜನತೆ ನೋಡುತ್ತಿದ್ದಾರೆ. ಅಮಾನತನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು" ಎಂದು ಗೋವಿಂದ ಕಾರಜೋಳ ಮನವಿ ಮಾಡಿದರು. "ಸದನವನ್ನು ಹೈಜಾಕ್ ಮಾಡಲು ಬಿಡಬಾರದು" ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಶರ್ಟ್ ಬಿಚ್ಚಿದ ಕಾರಣ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿ.ಕೆ.ಸಂಗಮೇಶ್ ಅವರನ್ನು ಸದನದಿಂದ ಒಂದು ವಾರಗಳ ಕಾಲ ಅಮಾನತುಗೊಳಿಸಿದ್ದಾರೆ. ಈ ಹಿನ್ನೆಲೆ ಸಂಗಮೇಶ್ ಅವರನ್ನು ಸದನದ ಒಳಗೆ ಬರಲು ಬಿಡಲಿಲ್ಲ. ಆದೇಶ ಪತ್ರ ತೋರಿಸಿ ಎಂದ ಸಂಗಮೇಶ್ ಪಟ್ಟುಹಿಡಿದಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಯತ್ನಿಸಿದರೂ ಕೂಡಾ ಸಂಗಮೇಶ್ ಅವರನ್ನು ಸದನದ ಒಳಗೆ ಕರೆದುಕೊಂಡು ಹೋಗಲು ಸಾಧ್ಯವಾಗಿಲ್ಲ.
"ಸದನದ ಒಳಗೆ ಸಂಗಮೇಶ್ ಅವರಿಗೆ ಹೋಗಲು ಬಿಡದಿರುವುದು ದೌರ್ಜನ್ಯ. ಇದು ಹಿಟ್ಲರ್ ಆಡಳಿತವಾ?. ಸ್ಪೀಕರ್ ಬಿಜೆಪಿಯ ಕೈಗೊಂಬೆ ಎನ್ನುವುದಕ್ಕೆ ಇದೇ ಸಾಕ್ಷಿ" ಎಂದು ಆರೋಪಿಸಿದ್ದಾರೆ.
ಈ ಸಂದರ್ಭ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಅವರು ವಿಧಾನಸಭೆಯ ಮೊಗಸಾಲೆಗೆ ಬಂದಿದ್ದು, "ಸ್ಪೀಕರ್ನ ಆದೇಶ ಇದೆಯಾ?" ಎಂದು ಕೇಳಿ ಸಂಗಮೇಶ್ ಅವರನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ.