ಬೆಂಗಳೂರು, ಮಾ.04 (DaijiworldNews/HR): ಕೇಂದ್ರೀಕೃತ ವ್ಯವಸ್ಥೆ ಜಾರಿಗೊಳಿಸಿ ನರೇಂದ್ರ ಮೋದಿ ಮತ್ತು ಅಮೀತ್ ಶಾ ಜೋಡಿ ಪ್ರಜಾಪ್ರಭುತ್ವವನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಳ್ಳುವ ಷಡ್ಯಂತ್ರ ನಡೆಸುತ್ತಿದ್ದಾರೆ" ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಬಿಜೆಪಿ ಪ್ರತಿಪಾದಿಸುತ್ತಿರುವ "ಒಂದು ದೇಶ ಒಂದು ಚುನಾವಣೆ" ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಹುನ್ನಾರವಾಗಿದ್ದು, ಪ್ರಜಾಪ್ರಭುತ್ವವನ್ನು ತಮ್ಮ ಮುಷ್ಠಿಯಲ್ಲಿರಿಸಲು ಮೋದಿ-ಶಾ ಜೋಡಿ ಷಡ್ಯಂತ್ರ ನಡೆಸುತ್ತಿದ್ದಾರೆ" ಎಂದಿದೆ.
ಇನ್ನು "ಒಂದು ದೇಶ ಒಂದು ಚುನಾವಣೆ ಚರ್ಚಿಸಬೇಕಾಗಿದ್ದು ಸಂಸತ್ತಿನಲ್ಲಿ ಹೊರತು, ಸದನದಲ್ಲಲ್ಲ. ದಿಕ್ಕು ತಪ್ಪಿಸಲು, ಕಲಾಪದ ಸಮಯ ವ್ಯರ್ಥ ಮಾಡಲು ನಿರ್ಧರಿಸಿ ಅಪ್ರಸ್ತುತ ಚರ್ಚೆಗೆ ಬಿಜೆಪಿ ಮುಂದಾಗಿದ್ದು, ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯವಾಗಿದೆ" ಎಂದು ಹೇಳಿದೆ.
"ಬಿಜೆಪಿಗೆ ಚರ್ಚೆ, ಸಂವಾದದಲ್ಲಿ ನಂಬಿಕೆ, ಆಸಕ್ತಿ ಇಲ್ಲ. ರಾಷ್ಟ್ರೀಯ ಮಹತ್ವದ ವಿಚಾರಗಳನ್ನ ಚರ್ಚಿಸಲು ಸಂಸತ್ತಿದೆ, ಅಲ್ಲಿ ಚರ್ಚೆಗೆ ಬನ್ನಿ. ಅಧಿವೇಶನದಲ್ಲಿ ರಾಜ್ಯದ ಮಹತ್ವದ ವಿಚಾರಗಳಿವೆ. ಬಜೆಟ್ ಕೊರತೆ ಬಿದ್ದಿದೆ, ಕೇಂದ್ರದಿಂದ ತೆರಿಗೆ ಅನ್ಯಾಯವಾಗಿದೆ, ಬೆಲೆ ಏರಿಕೆಯಿಂದ ಜನ ನೊಂದಿದ್ದು ಅದಕ್ಕೆ ನಿಮ್ಮಲ್ಲಿರುವ ಪರಿಹಾರ ಚರ್ಚಿಸಿ, ತಿಳಿಸಿ" ಎಂದು ಟ್ವೀಟ್ ಮಾಡಿದೆ.