ನವದೆಹಲಿ, ಮಾ.04 (DaijiworldNews/HR): "ಖಾಸಗಿ ಆಸ್ಪತ್ರೆಗಳಲ್ಲಿ ಪ್ರವೇಶ ಮತ್ತು ಚಿಕಿತ್ಸೆ ನೀಡುವಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆ ನೀಡಬೇಕು" ಎಂಬುದಾಗಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಆರ್. ಎಸ್. ರೆಡ್ಡಿ ಅವರನ್ನು ಒಳಗೊಂಡ ನ್ಯಾಯಪೀಠ ಕಳೆದ ವರ್ಷದ ಆಗಸ್ಟ್ 4ರಂದು, "ಕೊರೊನಾ ಸೋಂಕಿಗೆ ಒಳಗಾಗುವ ಅಪಾಯ ಇರುವ ಹಿರಿಯ ನಾಗರಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರವೇಶ ಮತ್ತು ಚಿಕಿತ್ಸೆಗೆ ಅವಕಾಶ ನೀಡಬೇಕೆಂದು" ನಿರ್ದೇಶನ ನೀಡಿತ್ತು. ಇದೀಗ ಆ ಆದೇಶವನ್ನು ಪರಿಷ್ಕರಿಸಿ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಹಿರಿಯ ನಾಗರಿಕರಿಗೆ ಚಿಕಿತ್ಸೆ ಆದ್ಯತೆ ನೀಡಬೇಕೆಂದು" ಆದೇಶಿಸಿದೆ.
ಇನ್ನು ಹಿರಿಯ ವಕೀಲ ಅಶ್ವನಿ ಕುಮಾರ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿದ್ದು, ಆ ಅರ್ಜಿಯಲ್ಲಿ ಒಡಿಶಾ ಮತ್ತು ಪಂಜಾಬ್ ಹೊರತುಪಡಿಸಿ ಬೇರೆ ಯಾವ ರಾಜ್ಯಗಳೂ, ಈ ಹಿಂದೆ ಕೋರ್ಟ್ ನೀಡಿದ ನಿರ್ದೇಶನಕ್ಕೆ ಅನುಗುಣವಾಗಿ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿಲ್ಲ ಎಂದು ಉಲ್ಲೇಖಿಸಿದರು.
ಹಿರಿಯ ನಾಗರಿಕರಿಗೆ ನೆಮ್ಮದಿ ನೀಡುವಂತಹ ಅಶ್ವಿನ್ ಕುಮಾರ್ ನೀಡಿದ ಹೊಸ ಸಲಹೆಗಳಿಗೆ ಸ್ಪಂದಿಸಲು ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಮೂರು ವಾರಗಳ ಕಾಲಾವಕಾಶ ನೀಡಿತು ಎನ್ನಲಾಗಿದೆ.