ಬೆಂಗಳೂರು, ಮಾ.04 (DaijiworldNews/MB): ಯಾವುದೇ ಪ್ರದೇಶದಲ್ಲಿ ಒಂದೆರಡು ಕೊರೊನಾ ಪ್ರಕರಣಗಳು ಕಂಡು ಬಂದರೂ, ಆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಘೋಷಿಸಲಾಗುವುದು. ಕಚೇರಿ ಅಥವಾ ಕಟ್ಟಡದಲ್ಲಿ ಒಂದೆರಡು ಪ್ರಕರಣ ಕಂಡು ಬಂದರೂ ವೈದ್ಯಕೀಯ ಸೇವೆ, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಚೇರಿಗಳನ್ನು ಬಂದ್ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆರೋಗ್ಯ ಇಲಾಖೆಯು ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಯಾವುದೇ ಪ್ರದೇಶದಲ್ಲಿ ಒಂದಿಬ್ಬರಿಗೆ ಕೊರೊನಾ ಪಾಸಿಟಿವ್ ಆದರೆ ಆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ 48 ಗಂಟೆಗಳೊಳಗಾಗಿ ಸೋಂಕು ನಿವಾರಕ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಹೇಳಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ಸಲಹೆಗಳನ್ನು ಪಡೆದು ಆರೋಗ್ಯ ಇಲಾಖೆಯು ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಒಂದು ವೇಳೆ ಐದಕ್ಕಿಂತ ಅಧಿಕ ಪ್ರಕರಣಗಳು ದೃಢಪಟ್ಟರೆ, ಇಡೀ ಕಟ್ಟಡವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗುತ್ತದೆ ಎಂದು ತಿಳಿಸಿದೆ.
ಇನ್ನು ಈ ರೀತಿ ಕಂಟೈನ್ಮೆಂಟ್ ಝೋನ್ನಲ್ಲಿ ವಾಸವಿರುವವರು ಮೇಲ್ವಿಚಾರಕರಿಗೆ ಮಾಹಿತಿ ನೀಡಿ ಮುಂದಿನ ಆದೇಶದವರೆಗೂ ಕಚೇರಿಗಳಿಗೆ ಹೋಗಬಾರದು. ಆ ಕಟ್ಟಡಲದಲ್ಲಿನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ನೀಡಬೇಕು. ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್, ಹೋಟೆಲ್, ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಲಾಗುವುದು. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸ್ ಬಳಕೆಯಂತಹ ಎಲ್ಲಾ ಮಾರ್ಗಸೂಚಿಯನ್ನು ಕಡ್ಡಯವಾಗಿ ಪಾಲಿಸಬೇಕು ಎಂದು ಇಲಾಖೆ ತಿಳಿಸಿದೆ.