ಪ್ರಯಾಗ್ ರಾಜ್, ಮಾ.04 (DaijiworldNews/PY): ಉತ್ತರ ಪ್ರದೇಶದ ಜೈಲರ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಉತ್ತರಪ್ರದೇಶದ ವಿಶೇಷ ಕಾರ್ಯಪಡೆ ಎನ್ಕೌಂಟರ್ನಲ್ಲಿ ಹತ್ಯೆಗೈದಿದೆ.
ಸಾಂದರ್ಭಿಕ ಚಿತ್ರ
ಎನ್ಕೌಂಟರ್ನಲ್ಲಿ ಹತ್ಯೆಯಾಗಿರುವ ಆರೋಪಿಗಳನ್ನು ವಕೀಲ್ ಪಾಂಡೆ ಅಲಿಯಾಸ್ ರಾಜೀವ್ ಪಾಂಡೆ, ಹೆಚ್.ಎಸ್.ಅಹ್ಮದ್ ಅಲಿಯಾಸ್ ಪಿಂಟು ಎಂದು ಗುರುತಿಸಲಾಗಿದೆ.
ಆರೋಪಿಗಳು ಮುನ್ನಾ ಬಜರಂಗಿ ಗ್ಯಾಂಗ್ ಹಾಗೂ ಶಾರ್ಪ್ ಶೂಟರ್ ದಿಲೀಪ್ ಮಿಶ್ರಾ ಗ್ಯಾಂಗ್ನ ಸದಸ್ಯರಾಗಿದ್ದಾರೆ. ಇವರು 2013ರಲ್ಲಿ ಉತ್ತರಪ್ರದೇಶದ ಉಪ ಜೈಲರ್ ಹತ್ಯೆಯಲ್ಲಿ ಭಾಗಿಯಾಗಿದ್ದರು.
ಇಬ್ಬರು ರೌಡಿಗಳನ್ನು ಮಾ.3ರಂದು ನಡೆದ ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿದೆ. 9ಎಂಎಂ, 30 ಎಂಎಂ ಪಿಸ್ತೂಲ್ ಹಾಗೂ ಜೀವಂತ ಕಾರ್ಟ್ರಿಡ್ಜ್ ಅನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
2013ರಲ್ಲಿ ಈ ಆರೋಪಿಗಳು ಗ್ಯಾಂಗ್ಸ್ಟರ್ ಮುನ್ನಾ ಬಜರಂಗಿ ಹಾಗೂ ಮುಖ್ತಾರ್ ಅನ್ಸಾರಿ ಸೂಚನೆಯಂತೆ ಜೈಲರ್ ಅನಿಲ್ ಕುಮಾರ್ ತ್ಯಾಗಿ ಅವರನ್ನು ಹತ್ಯೆಗೈದಿದ್ದರು.