ಬೆಂಗಳೂರು, ಮಾ.04 (DaijiworldNews/MB): ಮೈಸೂರು ಮೇಯರ್ ಚುನಾವಣೆ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಸುದ್ದಿ ಕೇಳಿ ಬರುತ್ತಿರುವ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬುಧವಾರ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲು ಹಿಡಿದು ಆಶೀರ್ವಾದ ಪಡೆದಿದ್ದಾರೆ.
ಜನಧ್ವನಿ ಯಾತ್ರೆ ಕಾರ್ಯಕ್ರಮವು ಬುಧವಾರ ನಡೆದಿದ್ದು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಕಾಲು ಹಿಡಿದು ಡಿಕೆಶಿ ಅವರು ಆಶೀರ್ವಾದ ಪಡೆದುಕೊಂಡಿದ್ದಾರೆ.
ಮೈಸೂರು ಮೇಯರ್ ಚುನಾವಣೆ ವಿಚಾರದಲ್ಲಿ ಈ ನಾಯಕರಿಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಎಂದು ಹೇಳಲಾಗಿದ್ದು, ಈ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಕಾಂಗ್ರೆಸ್ ಹೈಕಮಾಂಡ್ ಕೂಡಾ ಪ್ರಯತ್ನ ನಡೆಸಿತ್ತು. ಕೈ ನಾಯಕ ಮಧು ಯಕ್ಷಿ ಗೌಡ ಅವರು ಆಗಮಿಸಿ ಡಿಕೆಶಿ ಹಾಗೂ ಸಿದ್ದು ಜೊತೆ ಪ್ರತ್ಯೇಕ ಸಮಾಲೋಚನೆಯನ್ನೂ ನಡೆಸಿದ್ದರು.
ಈ ಎಲ್ಲಾ ಬೆಳವಣಿಗೆಯ ಬೆನ್ನಿಗೆ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯರ ಕಾಲು ಹಿಡಿಯುವ ಮೂಲಕ ಶೀತಲ ಸಮರಕ್ಕೆ ತೆರೆ ಎಳೆದ್ರಾ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.
ಡಿಕೆಶಿ ಅವರು ಸಿದ್ದರಾಮಯ್ಯರ ಕಾಲು ಹಿಡಿದು ಆಶೀರ್ವಾದ ಪಡೆಯುವ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.