ಬೆಂಗಳೂರು, ಮಾ 04 (DaijiworldNews/MS): ರಾಜ್ಯ ಬಜೆಟ್ ಅಧಿವೇಶನ ಇಂದಿನಿಂದ ಇನ್ನೇನು ಆರಂಭಗೊಳ್ಳಲಿದ್ದು ಸದನ ಕದನಕ್ಕೆ ಆಡಳಿತ ಹಾಗೂ ವಿರೋಧ ಪಕ್ಷಗಳು ಸಜ್ಜಾಗಿದೆ. ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವುದರೊಂದಿಗೆ ಅಧಿವೇಶನ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಎಲ್ಲದಕ್ಕೂ ಹೆಚ್ಚಾಗಿ ರಮೇಶ್ ಜಾರಕಿ ಹೊಳಿ ರಾಸಲೀಲೆ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಲಿದೆ.
19 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಮೊದಲ ಎರಡು ದಿನ ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆ ನಡೆಯಲಿದ್ದು, ಮಾರ್ಚ್ 8 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2021-2022 ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಅನಂತರ ಮಾ. 31ರ ವರೆಗೆ ಬಜೆಟ್ ಮೇಲಿನ ಚರ್ಚೆ, ಸರಕಾರದ ಉತ್ತರ, ಪ್ರಶ್ನೋತ್ತರ ಕಲಾಪಗಳು ಇರಲಿವೆ .ಈ ಅಧಿವೇಶನದಲ್ಲಿ ಕರ್ನಾಟಕ ಪೌರಸಭೆಗಳ ಮಸೂದೆ–2021, ಸೊಸೈಟಿಗಳ ನೋಂದಣಿ ಮಸೂದೆ–2021 ಮತ್ತು ಲೇವಾದೇವಿದಾರರ ನೋಂದಣಿ ಮಸೂದೆ–2021ರ ಮಂಡನೆ ಆಗಲಿದೆ.
ಅಡಳಿತ ಪಕ್ಷದ ಮೇಲೆ ಹಲವು ಬ್ರಹ್ಮಾಸ್ತ್ರಗಳನ್ನು ಪ್ರಯೋಗ ಮಾಡಲು ಕಾಂಗ್ರೆಸ್ ಅಂತಿಮ ಹಂತದ ಸಿದ್ಧತೆ ನಡೆಸುತ್ತಿದೆ. ಎಲ್ಲದಕ್ಕೂ ಹೆಚ್ಚಾಗಿ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ವಿಪಕ್ಷಗಳ ಪ್ರಮುಖ ಅಸ್ತ್ರವಾಗಲಿದೆ. ಸರ್ಕಾರ ಜಲಸಂಪನ್ಮೂಲ ಖಾತೆಯ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಂಡು ಮುಜುಗರದಿಂದ ತಪ್ಪಿಸಿಕೊಂಡಿದ್ದರೂ, ಸಿ.ಡಿ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಲು ಕಾಂಗ್ರೆಸ್ ಮುಂದಾಗಿದೆ.