ಮೈಸೂರು, ಮಾ.04 (DaijiworldNews/MB): ''ಪರಸತಿ, ಪರಧನ ಮತ್ತು ಪರದೇಶಿ ಮದ್ಯ ರಾಜಕಾರಣ ಓಡಾಡುತ್ತಿದೆ. ಈಗಿನ ರಾಜಕಾರಣಿಗಳು ಹೈಬ್ರಿಡ್ ತಳಿಗಳು. ನಾಟಿ ತಳಿಗಳು ಈಗ ದೊರೆಯುತ್ತಿಲ್ಲ'' ಎಂದು ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ವ್ಯಂಗ್ಯವಾಡಿದರು.
ಬುಧವಾರ ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಈಗಿನ ರಾಜಕಾರಣ ರಾಸಲೀಲೆ, ರಸಲೀಲೆ, ಕರ್ಮಕಾಂಡಗಳ ನಡುವೆ ಇದೆ. ರಾಜಕಾರಣದಲ್ಲಿ ಮರ್ಯಾದಸ್ಥರು ಸಿಗೋದು ಈಗ ವಿರಳವಾಗಿದೆ. ಈಗಿನ ರಾಜಕಾರಣಿಗಳು ಹೈಬ್ರಿಡ್ ತಳಿಗಳು. ವೀರೇಂದ್ರ ಪಾಟೀಲ್, ದೇವೇಗೌಡ. ಜೆ.ಹಚ್.ಪಟೇಲ್ರಂತಹ ತಳಿಗಳು ಉಳಿಯಬೇಕು'' ಎಂದು ಅಭಿಪ್ರಾಯಿಸಿದರು.
ಇನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ''ನತದೃಷ್ಟ ಮುಖ್ಯಮಂತ್ರಿ'' ಎಂದು ಹೇಳಿರುವ ಸಿಎಂ ಇಬ್ರಾಹಿಂ ಅವರು, ''ಅಂತಹ ಮುಖ್ಯಮಂತ್ರಿ ಸಿಕ್ಕಿರುವುದು ರಾಜ್ಯದ ದುರ್ದೈವ. ಸಿಎಂಗೆ ತಕ್ಕ ಸಹಪಾಠಿ ಮಂತ್ರಿ, ಅದಕ್ಕೆ ತಕ್ಕದಾದ ಪಕ್ಷ ಬೇರೆ ಇದೆ. ಇವೆಲ್ಲದರ ನಡುವೆ ಸಿಕ್ಕಿಹಾಕಿಕೊಂಡು ಕೇಶವ ಕೃಪ, ಬಸವ ಕೃಪ ಒದ್ದಾಟ ನಡೆಸುತ್ತಿದೆ'' ಎಂದು ಕಟುಕಿದರು.
''ಹಾಗೆಯೇ ಈಗಿನ ರಾಜಕಾರಣ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಇದು ಇನ್ನು ಸರಿಯಾಗುತ್ತದೆ ಎಂಬ ನಂಬಿಕೆ ನನಗಂತು ಇಲ್ಲ. ಹಾಗೂ ಸರಿಯಾಗಬೇಕಾದರೆ ಒಂದು ದೊಡ್ಡ ಕ್ರಾಂತಿಯೇ ನಡೆಯಬೇಕು'' ಎಂದರು.
ಇನ್ನು ಇದೇ ವೇಳೆ ಶಾಸಕ ತನ್ವೀರ್ ಸೇಠ್, ಹ್ಯಾರೀಸ್ ಭೇಟಿ ಕುರಿತು ಮಾತನಾಡಿದ ಅವರು, "ಮೇಯರ್ ಮೈತ್ರಿ ವಿಚಾರದಲ್ಲಿ ಅವರನ್ನು ನಾನು ಮನೆಗೆ ಕರೆದು ಮಾತುಕತೆ ನಡೆಸಿದ್ದೆ. ಇದು ಸಣ್ಣ ವಿಷಯವಲ್ಲವೇ? ಯಾಕಿಷ್ಟು ದೊಡ್ಡದು ಮಾಡುವುದು ಎಂದು ಅವರನ್ನು ಪ್ರಶ್ನಿಸಿದೆ, ಅಷ್ಟೇ'' ಎಂದು ಹೇಳಿದರು.