ಚೆನ್ನೈ, ಮಾ.04 (DaijiworldNews/MB) : ಎಐಎಸ್ಎಂಕೆ ಪಕ್ಷದ ಸಂಸ್ಥಾಪಕ, ನಟ ಆರ್.ಶರತ್ ಕುಮಾರ್ ಅವರು ಎಂಎನ್ಎಂ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಅವರು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬುಧವಾರ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಬುಧವಾರ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ''ಈಗಾಗಲೇ ಎಐಎಸ್ಎಂಕೆ ಮತ್ತು ಎಂಎನ್ಎಂ ಪಕ್ಷಗಳ ಮೈತ್ರಿ ಖಚಿತವಾಗಿದೆ. ತೃತೀಯ ರಂಗಕ್ಕೆ ಕಮಲ್ ಹಾಸನ್ ನೇತೃತ್ವ ಇರಲಿದ್ದು ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುತ್ತಾರೆ'' ಎಂದು ತಿಳಿಸಿದ್ದಾರೆ.
ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಸಮಾನ ಮನಸ್ಕ ಪಕ್ಷದೊಂದಿಗೆ ಮೈತ್ರಿ ಮತುಕತೆ ನಡೆಯುತ್ತಿದೆ ಎಂದು ಹೇಳಿರುವ ಕಮಲ್ ಹಾಸನ್, ''ಸೀಟು ಹಂಚಿಕೆ ಬಗ್ಗೆ ತೀರ್ಮಾಣ ಕೈಗೊಳ್ಳುವ ಮುನ್ನವೇ ಮೈತ್ರಿ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಹಿಳೆಯರಿಗೆ ಶೇ 50 ಮೀಸಲಾತಿ, ರಾತ್ರಿ ವೇಳೆ ಪ್ರತಿ ಜಿಲ್ಲೆಯಲ್ಲಿ ಉಳಿಯಲು ಅನುಕೂಲ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುತ್ತದೆ. ಮಹಿಳೆಯರಿಗಾಗಿ ಮಹಿಳೆಯರೇ ನಡೆಸುವ ಬ್ಯಾಂಕ್ ಸ್ಥಾಪಿಸಲಾಗುತ್ತದೆ'' ಎಂದು ಹೇಳಿದ ಅವರು, 50 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಭರವಸೆಯನ್ನು ಕೂಡಾ ನೀಡಿದ್ದಾರೆ.
''ತಮಿಳರು ಮಾರಾಟಕಿಲ್ಲ, ಅವರ ಮತಗಳು ಸಹ ಮಾರಾಟಕ್ಕಿಲ್ಲ'' ಎಂದು ಹೇಳಿರುವ ಅವರು, ಭ್ರಷ್ಟಾಚಾರ ಮುಕ್ತ ಸರ್ಕಾರ ಸ್ಥಾಪನೆಗಾಗಿ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ವೈಜ್ಞಾನಿಕ ಸಲಹೆಗಾರರಾಗಿದ್ದ ವಿ.ಪೊನರಾಜ್ ಅವರು ಎಂಎನ್ಎಂ ಪಕ್ಷದ ಉಪಾಧ್ಯಕ್ಷರಾಗಿ ಜವಾಬ್ದಾರಿ ವಹಿಸಲಿದ್ದಾರೆ ಎಂದೂ ಕಮಲ್ ಹಾಸನ್ ಪ್ರಕಟಿಸಿದ್ದಾರೆ.
ಇನ್ನು ಶರತ್ ಕುಮಾರ್ ಅವರು ಮಾತನಾಡುವ ವೇಳೆ, ತಮ್ಮ ಪತ್ನಿ, ಎಐಎಸ್ಎಂಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ರಾಧಿಕಾ ಶರತ್ಕುಮಾರ್ ಕೋವಿಲ್ಪತ್ತಿ ಅಥವಾ ವೆಲಚೇರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ.