ಮಂಗಳೂರು, ಮಾ. 03 (DaijiworldNews/SM): ದೈನಂದಿನ ಆಡಳಿತ ಕಾರ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ದಿನೇ ದಿನೇ ಹೆಚ್ಚಾಗಿ ಬಳಕೆ ಮಾಡುತ್ತಿದ್ದೇವೆ. ಅವುಗಳ ಸುರಕ್ಷತೆಯ ಬಗ್ಗೆ ಅರಿವು ಹೊಂದುವುದು ಸಹ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ.ವಿ ತಿಳಿಸಿದರು.
ಅವರು ಇಂದು ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಸಾಮಾಥ್ರ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಇ-ಆಡಳಿತ ಸಂಸ್ಥೆ, ಮೈಸೂರು ಹಾಗೂ ಇ-ಆಡಳಿತ ಕೇಂದ್ರ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ “ಸೈಬರ್ ಸೆಕ್ಯುರಿಟಿ ಮತ್ತು ಇ- ಆಡಳಿತ ವಿಷಯಗಳ ಕುರಿತು ಜಿಲ್ಲೆಯ ಗ್ರೂಪ್ ’ಎ’ ಅಧಿಕಾರಿಗಳಿಗೆ ನಡೆದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ಸರಕಾರಿ ಸೇವೆಗಳು ಹಾಗೂ ಕೆಲಸಗಳನ್ನು ಸುಲಭವಾಗಿ ಹಾಗೂ ಶೀಘ್ರವಾಗಿ ಜನಸಾಮಾನ್ಯರಿಗೆ ಒದಗಿಸಲು ಪೂರಕವಾಗಿವೆ. ಅವುಗಳ ಮಾಹಿತಿಗಳು ಅಂತರ್ಜಾಲದಲ್ಲಿ ಸೋರಿಕೆಯಾಗದಂತೆ ಹಾಗೂ ಅವುಗಳ ದುರುಪಯೋಗವಾಗದಂತೆ ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು ಅತ್ಯವಶ್ಯಕ ಎಂದರು.
ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರೊಂದಿಗೆ ಸಂವಹನ ಅತ್ಯಂತ ಸುಲಭವಾಗಿದೆ ಸರಕಾರಿ ವೆಬ್ಸೈಟ್ಗಳನ್ನು ಹ್ಯಾಕರ್ ಗಳು ಸುಲಭವಾಗಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದ ಅವರು ಸೈಬರ್ ಅಪಾಧಗಳ ಬಗ್ಗೆ ಅರಿವು ಹೊಂದಿದಾಗ ತಮಗಾದ ಮೋಸದ ಬಗ್ಗೆ ದೂರು ನೀಡಿ ನ್ಯಾಯ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಸರಕಾರಿ ಅಧಿಕಾರಿಗಳು ಇ-ಆಡಳಿತವನ್ನು ಸರಿಯಾಗಿ ಬಳಸುವುದರೊಂದಿಗೆ ತಮ್ಮ ಇಲಾಖೆಯ ಕೆಲಸಗಳನ್ನು ತಂತ್ರಜ್ಞಾನ ಬಳಸಿಕೊಂಡು ಶೀಘ್ರವಾಗಿ ಮಾಡಬೇಕು ಎಂದ ಅವರು, ಅಧಿಕಾರಿಗಳು ಕಚೇರಿಯ ಕಂಪ್ಯೂಟರ್ ಮತ್ತು ಮೊಬೈಲ್ಗಳಲ್ಲಿ ಅಂತರ್ಜಾಲ ಬಳಕೆಯ ಉಪಯೋಗ ಪಡೆದುಕೊಳ್ಳಬೇಕು ಜೊತೆಗೆ ಅದರ ಅನಾನುಕೂಲತೆಗಳ ಬಗ್ಗೆ ಜಾಗೃತೆ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.