ನವದೆಹಲಿ, ಮಾ.03 (DaijiworldNews/MB) : ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್ ಲಸಿಕೆಯು ಕೊನೆಯ ಹಂತದ ಕ್ಲಿನಿಕಲ್ ಟ್ರಯಲ್ನ ಮಧ್ಯಂತರ ವಿಶ್ಲೇಷಣೆ ವೇಳೆ ಶೇ 80.6ರಷ್ಟು ಪರಿಣಾಮಕಾರಿ ಎಂದು ತಿಳಿದು ಬಂದಿರುವುದಾಗಿ ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದ್ದು ಇದರಲ್ಲಿ 25,800 ಮಂದಿ ಭಾಗವಹಿಸಿದ್ದರು. ಈ ಪೈಕಿ 43 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಆಧಾರದಲ್ಲಿ ಸಿದ್ದಪಡಿಸಲಾದ ಮಧ್ಯಂತರ ವಿಶ್ಲೇಷಣೆಯಲ್ಲಿ ಕೊರೊನಾ ದೃಢಪಟ್ಟ 43 ಮಂದಿಯ ಪೈಕಿ 36 ಜನರನ್ನು ಪ್ರಯೋಗಕ್ಕೆ ಬಳಸಲಾಗಿತ್ತು. ಈ ವೇಳೆ 7 ಮಂದಿ ಮಾತ್ರ ಲಸಿಕೆ ಪಡೆದಿದ್ದು ಈ ಆಧಾರದಲ್ಲಿ ಲಸಿಕೆ ಶೇ 80.6ರಷ್ಟು ಪರಿಣಾಮಕಾರಿ ಎಂದು ತೀರ್ಮಾನಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಕೊನೆಯ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುವುದಕ್ಕೂ ಮುನ್ನವೇ ಜನವರಿಯಲ್ಲಿ ಸರ್ಕಾರ ಕೋವಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಿತ್ತು.
ದೇಶದಲ್ಲಿ ಕೊರೊನಾ ವಿರುದ್ದದ ಲಸಿಕೆ ನೀಡಿಕೆ ಅಭಿಯಾನ ಪ್ರಗತಿಯಲ್ಲಿದ್ದು, ಸೋಮವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಕೂಡಾ ದೇಶೀಯ ಕೊವ್ಯಾಕ್ಸಿನ್ ಲಸಿಕೆ ಪಡೆದಿದ್ದಾರೆ.