ಬೆಂಗಳೂರು, ಮಾ.03 (DaijiworldNews/PY): ಕಾಂಗ್ರೆಸ್ ನಡೆಸುತ್ತಿರುವ ಜನಧ್ವನಿ ಜಾಥಾದ ಬಗ್ಗೆ ಬಿಜೆಪಿ ಟೀಕೆ ಮಾಡಿದ್ದು, "ಜನಧ್ವನಿ ಜಾಥಾ ಅಧಿಕಾರದ ಕನಸಿನಲ್ಲಿ ಮಾಡುತ್ತಿರುವ ಹೋರಾಟವೇ ಹೊರತು, ಬೇರೇನೂ ವಿಶೇಷವಿಲ್ಲ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಅಧಿಕಾರವಿಲ್ಲದ ಹತಾಶೆಯಿಂದ ಕಾಂಗ್ರೆಸ್ ಜನಧ್ವನಿ ಜಾಥಾ ಮಾಡುತ್ತಿದೆ. ವಾಸ್ತವದಲ್ಲಿ ಇದು ಜನರ ಧ್ವನಿಗೆ ವಿರುದ್ಧವಾದ ಪ್ರತಿಭಟನೆಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಜನರು ದೇಶದೆಲ್ಲೆಡೆ ತಿರಸ್ಕರಿಸುತ್ತಿದ್ದಾರೆ. ಜನಧ್ವನಿ ಜಾಥಾ ಅಧಿಕಾರದ ಕನಸಿನಲ್ಲಿ ಮಾಡುತ್ತಿರುವ ಹೋರಾಟವೇ ಹೊರತು, ಬೇರೇನೂ ವಿಶೇಷವಿಲ್ಲ" ಎಂದು ಟೀಕಿಸಿದೆ.
"ಕಾಂಗ್ರೆಸ್ ಈಗ ಮಾಡುತ್ತಿರುವುದು ಜನಧ್ವನಿ ಹೋರಾಟವಲ್ಲ, ಹರಿದು ಮೂರು ಬಾಗಿಲಾಗಿರುವ ಕಾಂಗ್ರೆಸ್ ಪಕ್ಷವನ್ನು ಒಂದೆಡೆ ಸೇರಿಸಲು ಮಾಡುತ್ತಿರುವ ಒಂದು ಹೋರಾಟ ಅಷ್ಟೇ. ಡಿಕೆಶಿ ಬಣ, ಸಿದ್ದರಾಮಯ್ಯ ಬಣ, ಖರ್ಗೆ ಬಣ. ಈ ಮೂರೂ ಬಣವನ್ನು ಸಮನ್ವಯಿಸಲು ನಡೆಸುತ್ತಿರುವ ಕಸರತ್ತೇ ಜನಧ್ವನಿ ಜಾಥಾ!" ಎಂದು ವ್ಯಂಗ್ಯವಾಡಿದೆ.
"ಜನಧ್ವನಿ ಹೆಸರಿನ ಮೂಲಕ ಕಾಂಗ್ರೆಸ್ ಈಗ ಬೀದಿನಾಟಕ ಆರಂಭಿಸಿದೆ. ಮುಖ್ಯಮಂತ್ರಿಯಾಗಿದ್ದುಕೊಂಡು ಸ್ವ ಕ್ಷೇತ್ರದಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟ ಸಿದ್ದರಾಮಯ್ಯ, ಇಂದು ಜನಧ್ವನಿ ಎಂಬ ನಾಟಕಕ್ಕೆ ಊದುಬತ್ತಿ ಹಿಡಿದು ನಿಂತಿರುವುದು ವಿಪರ್ಯಾಸ. ಇದು ಕಾಂಗ್ರೆಸ್ ಅಸ್ತಿತ್ವಕ್ಕಾಗಿ ನಡೆಯುತ್ತಿರುವ ಹೋರಾಟ ಅಷ್ಟೇ!" ಎಂದಿದೆ.
"ಲೋಕಸಭಾ ಚುನಾವಣೆಯಲ್ಲಿ ಜನತೆಯಿಂದ ತಿರಸ್ಕರಿಸಲ್ಪಟ್ಟ ಮಲ್ಲಿಕಾರ್ಜುನ ಖರ್ಗೆ ಅವರು ಜನಧ್ವನಿ ಹೋರಾಟ ಎನ್ನುತ್ತಿದ್ದಾರೆ. ಇದು ಯಾವ ರೀತಿಯ ಜನಧ್ವನಿ? ಜನರಿಂದಲೇ ತಿರಸ್ಕರಿಸಲ್ಪಟ್ಟವರು ಜನರ ಸಮಸ್ಯೆಗೆ ಹೇಗೆ ಧ್ವನಿಯಾಗುತ್ತಾರೆ. ಮೂರು ಮುಖ್ಯಮಂತ್ರಿ ಅಭ್ಯರ್ಥಿಗಳು ತಮ್ಮ ಪ್ರಭಾವ ಬೆಳೆಸಲು ಈ ಹೋರಾಟ ಹಮ್ಮಿಕೊಂಡಿದ್ದಾರೆ" ಎಂದು ತಿಳಿಸಿದೆ.
"ಜನಧ್ವನಿ ಜಾಥಾ ಮತ್ತು ಕಾಂಗ್ರೆಸ್ ನಾಯಕರು. ಸಿದ್ದರಾಮಯ್ಯ, ನಾನೇ ಮುಂದಿನ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಆಗಿದ್ದೇ ಸಿಎಂ ಆಗಲು, ಮಲ್ಲಿಕಾರ್ಜುನ ಖರ್ಗೆ, ಹೈಕಮಾಂಡ್ ನನ್ನನ್ನೇ ಸಿಎಂ ಎಂದು ಪರಿಗಣಿಸಲಿದೆ. ಇವರ ನಡುವಿನ ಹೋರಾಟವೇ ನಿಂತಿಲ್ಲ, ಇನ್ನು ಜನರ ಸಮಸ್ಯೆಗೆ ಹೇಗೆ ಧ್ವನಿಯಾಗುತ್ತಾರೆ!?" ಎಂದು ಪ್ರಶ್ನಿಸಿದೆ.