ಬೆಂಗಳೂರು, ಮಾ.03 (DaijiworldNews/MB) : ಮಂಗಳವಾರ ಸರ್ಕಾರದ ಪ್ರಭಾವಿ ವ್ಯಕ್ತಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿಯನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆ ಹುಟ್ಟಿಸಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಈಗ ತನ್ನ ಬಳಿ ಮೂವರು ಪ್ರಭಾವಿಗಳ ಸಿಡಿ ಇದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ''ನಾನು ಈ ಸಂದರ್ಭದಲ್ಲಿ ನನ್ನ ಬಳಿ ಸಿಡಿ ಇದೆ ಎಂದು ಮಾತ್ರ ಹೇಳಬಲ್ಲೆನೇ ಹೊರತು ಯಾರದ್ದು ಎಂದು ಈಗ ಹೇಳಲು ಆಗುವುದಿಲ್ಲ. ನಾನು ಈಗ ಆರೋಪ ಮಾಡುತ್ತಿರುವ ಮೂವರ ಪೈಕಿ ಒಬ್ಬರು ಸಚಿವ ಸಂಪುಟದಲ್ಲಿದ್ದು ಇನ್ನಿಬ್ಬರು ಉನ್ನತ ಹುದ್ದೆಯಲ್ಲಿ ಇರುವವರು. ನಾನು ಕಾನೂನು ತಜ್ಞರ ಬಳಿ ಎಲ್ಲಾ ರೀತಿಯ ಸಲಹೆಯನ್ನು ಪಡೆದು ಅವರ ಹೆಸರನ್ನು, ಯಾವ ಪಕ್ಷದವರು, ಯಾವ ಹುದ್ದೆಯವರು ಎಂದು ಹೇಳುತ್ತೇನೆ'' ಎಂದು ತಿಳಿಸಿದ್ದಾರೆ.
''ನಾನು ಈಗಾಗಲೇ ನೀಡಿರುವ ಸಿಡಿ ಬಗ್ಗೆ ತನಿಖೆ ನಡೆದು ಸಂತ್ರಸ್ಥೆಗೆ ನ್ಯಾಯ ಸಿಗಬೇಕು'' ಎಂದು ಕೂಡಾ ಆಗ್ರಹಿಸಿದ್ದಾರೆ.
ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿಯನ್ನು ಮಂಗಳವಾರ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಬಿಡುಗಡೆ ಮಾಡಿದ್ದು ಜಲಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ರಮೇಶ್ ಜಾರಕಿಹೊಳಿ ಲೈಂಗಿಕ ಕಿರುಕುಳ ನೀಡಿದ್ದಾರೆ, ಅಧಿಕಾರ ದುರ್ಬಳಕೆ ಮಾಡಿ ಕಿರುಕುಳ ನೀಡಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಈ ವಿಚಾರ ಈಗಾಗಲೇ ರಾಜ್ಯ ರಾಜಕೀಯದಲ್ಲಿ ಭಾರೀ ಗದ್ದಲ ಎಬ್ಬಿಸಿದ್ದು ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಈ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಮಿತಿ ರಚಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಬಸವರಾಜು ಬೊಮ್ಮಾಯಿ ತಿಳಿಸಿದ್ದಾರೆ. ಏತನ್ಮಧ್ಯೆ ದಿನೇಶ್ ಕಲ್ಲಹಳ್ಳಿ ಅವರು ಮತ್ತೊಂದು ಸ್ಪೋಟಕ ಮಾಹಿತಿ ನೀಡಿದ್ದಾರೆ.