ನವದೆಹಲಿ, ಮಾ.03 (DaijiworldNews/PY): ಕೇಂದ್ರ ಸರ್ಕಾರವು, ಕೊರೊನಾ ಲಸಿಕೆಯ ಪಡೆಯಲು ಇದ್ದ ಸಮಯದ ಮಿತಿಯನ್ನು ತೆಗೆದುಹಾಕಿದ್ದು, "ಜನರಿಗೆ ಅನುಕೂಲವಾಗುವ ದಿನದ ಯಾವುದೇ ಸಮಯದಲ್ಲಾದರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದು" ಎಂದು ತಿಳಿಸಿದೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಟ್ವೀಟ್ ಮಾಡಿದ್ದು, "ಇನ್ನು ಮುಂದೆ ಸಾರ್ವಜನಿಕರು ತಮಗೆ ಅನುಕೂಲವಾಗುವ ದಿನದ ಯಾವುದೇ ಸಮಯದಲ್ಲಿ ಬಂದು ಲಸಿಕೆ ಹಾಕಿಸಿಕೊಳ್ಳಬಹುದು. ಜನರ ಆರೋಗ್ಯ ಹಾಗೂ ಸಮಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಶಸ್ತ್ಯ ನೀಡುತ್ತಾರೆ" ಎಂದು ಹೇಳಿದ್ದಾರೆ.
"ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಮಯದ ಮಿತಿಯನ್ನು ತೆಗೆದುಹಾಕಲಾಗಿದ್ದು, ತಮ್ಮ ಅನುಕೂಲದ ಸಮಯದಲ್ಲಿ ಬಂದು ಲಸಿಕೆ ಹಾಕಿಸಿಕೊಳ್ಳಬಹುದು" ಎಂದು ತಿಳಿಸಿದ್ದಾರೆ.
ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಅವರ ಪತ್ನಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಸಿಕ್ಕಿಂ ಗವರ್ನರ್ ಗಂಗಾ ಪ್ರಸಾದ್ ದಂಪತಿ ಹಾಗೂ ಹಲವು ಪ್ರಮುಖರು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.