ಬೆಂಗಳೂರು, ಮಾ.03 (DaijiworldNews/PY): "ಇಷ್ಟು ದಿನ ರಾಜ್ಯದಲ್ಲಿ ರಾಕ್ಷಸ ಸರ್ಕಾರವಿತ್ತು. ರಾಮ ರಾಜ್ಯ ನಿರ್ಮಾಣ ಮಾಡುತ್ತೇವೆ ಎಂದು ಹೊರಟವರ ಸರ್ಕಾರ ಇದೇನಾ?. ಎಂಥಾ ರಾಮ ರಾಜ್ಯ ತಂದಿದ್ದಾರೆ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಸಂಬಂಧ ಮಾತನಾಡಿದ ಅವರು, "ರಾಜ್ಯದಲ್ಲಿ ರಾಕ್ಷಸ ಸರ್ಕಾರ ಇದೆ ಎಂದು ಹೇಳಿ ನಮ್ಮ ಸರ್ಕಾರವನ್ನು ಕೆಳಕ್ಕಿಳಿಸಿ ಬಾಂಬೆಗೆ ತೆರಳಿ ರಾಮರಾಜ್ಯವನ್ನು ತಂದಿದ್ದೇವೆ ಎಂದು ಹೇಳಿದ್ದೀರಲ್ಲಾ, ಎಂತಾ ರಾಮ ರಾಜ್ಯವನ್ನು ತಂದಿದ್ದಾರೆ. ಎಲ್ಲರೂ ಕುಳಿತ ಈ ಬಗ್ಗೆ ಅವಲೋಕನ ಮಾಡಿ. ರಾಮ ರಾಜ್ಯದ ನಿರ್ಮಾಣ ಮಾಡುತ್ತೇವೆ ಎಂದು ಹೊರಟವರ ಸರ್ಕಾರ ಇದೇನಾ?" ಎಂದು ಪ್ರಶ್ನಿಸಿದರು.
"ಈ ರೀತಿಯಾದ ವಿಚಾರಗಳ ಬಗ್ಗೆ ಮಾತನಾಡುವುದು ಶೋಭೆ ತರುವುದಿಲ್ಲ. ನನಗೆ ಈ ವಿಷಯಗಳಲ್ಲಿ ರಾಜಕೀಯ ಮಾಡಲು ಇಷ್ಟವಿಲ್ಲ. ರಾಜಕೀಯ ಮಾಡಲು ಬೇರೆ ಮಾರ್ಗಗಳಿವೆ" ಎಂದು ಹೇಳಿದರು.
"ರಾಜಕೀಯ ವ್ಯಕ್ತಿಗಳ ಈ ರೀತಿಯಾದ ನಡವಳಿಕೆಗಳಿಂದ ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ಪರಿಣಾಮ ಬೀರಲಿದೆ. ಎಲ್ಲಾ ಪ್ರಕರಣ ಹಾಗೂ ಎಲ್ಲಾ ಬೆಳವಣಿಗೆಗಳ ಬಗ್ಗೆ ಉತ್ತರವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಪಡೆದುಕೊಳ್ಳುವುದು ಸೂಕ್ತ. ಬಿಜೆಪಿ ನಾಯಕರಿಂದ, ವಿಶ್ವನಾಥ್ ಅವರಿಂದ ಉತ್ತರ ಪಡೆದುಕೊಳ್ಳುವುದು ಸೂಕ್ತ. ಈ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ" ಎಂದರು.