ಲಕ್ನೋ, ಮಾ.03 (DaijiworldNews/MB) : ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ರಾಮ ಮಂದಿರ ಸಂಕೀರ್ಣವನ್ನು ಇನ್ನಷ್ಟು ವಿಸ್ತಾರ ಮಾಡುವ ನಿಟ್ಟಿನಲ್ಲಿ ಅಯೋಧ್ಯೆಯ 70 ಎಕರೆ ರಾಮ ಜನ್ಮಭೂಮಿ ಆವರಣದ ಪಕ್ಕದಲ್ಲಿರುವ 676.85 ಚದರ ಮೀಟರ್ ಭೂಮಿಯನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 1 ಕೋಟಿ ರೂ.ಗೆ ಖರೀದಿಸಿರುವುದಾಗಿ ವರದಿಯಾಗಿದೆ.
ರಾಮ ಮಂದಿರ ಸಂಕೀರ್ಣವು 70 ಎಕರೆ ಆವರಣದಲ್ಲಿದ್ದು ಇದನ್ನು 107 ಎಕರೆಗೆ ವಿಸ್ತರಿಸುವ ಉದ್ದೇಶದಿಂದ 676.85 ಚದರ ಮೀಟರ್ ಭೂಮಿಯನ್ನು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ರಾಮ ಮಂದಿರ ಪಕ್ಕದ ಭೂಮಿಯ ಮಾಲೀಕ ಸ್ವಾಮಿ ದೀಪ್ ನಾರಾಯಣ್ ಅವರಿಂದ ಖರೀದಿಸಿ ನೋಂದಾವಣೆ ಮಾಡಿಕೊಂಡಿದ್ದಾರೆ. ಈ ನೋಂದಾವಣೆ ಪತ್ರಗಳಿಗೆ ದೇವಾಲಯ ಟ್ರಸ್ಟ್ ಸದಸ್ಯ, ಆರ್ ಎಸ್ಎಸ್ ಅಯೋಧ್ಯೆ ಪ್ರಚಾರಕ್ ಡಾ.ಅನಿಲ್ ಮಿಶ್ರಾ ಹಾಗೂ ಬಿಜೆಪಿಯ ಗೋಸಿಂಗಂಜ್ ಶಾಸಕ ಐಪಿ ತಿವಾರಿ ಸಾಕ್ಷಿಗಳಾಗಿ ಸಹಿ ಹಾಕಿದ್ದಾರೆ ಎಂದು ವರದಿ ತಿಳಿಸಿದೆ.
ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಆರಂಭಿಸಲಾಗಿದ್ದ ರಾಮ ಮಂದಿರ ನಿರ್ಮಾಣ ಕಾರ್ಯ ಶನಿವಾರ ಆರಂಭವಾಗಿದ್ದು ನಿರೀಕ್ಷೆಗೂ ಮೀರಿ 2100 ಕೋಟಿ ರೂಪಾಯಿ ಸಂಗ್ರಹವಾಗಿದೆ ಎನ್ನಲಾಗಿದೆ.