ನವದೆಹಲಿ, ಮಾ.03 (DaijiworldNews/PY): "ಶಿಕ್ಷಣ, ಕೌಶಲ ಸೇರಿದಂತೆ ಸಂಶೋಧನೆ ಹಾಗೂ ಹೊಸ ಪರಿಕಲ್ಪನೆಗೆ ಕೆಂದ್ರ ಬಜೆಟ್ನಲ್ಲಿ ಆದ್ಯತೆ ನೀಡಿದ್ದು, ಕೃಷಿ, ಇಂಧನ ಹಾಗೂ ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರತಿಭಾವಂತ ಯುವಕರಿಗೆ ಸಾಕಷ್ಟು ಅವಕಾಶಗಳು ಸಿಗಲಿವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಬಜೆಟ್ ನಿಬಂಧನೆಗಳ ಅನುಷ್ಠಾನ ವಿಚಾರದ ಬಗ್ಗೆ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಅವರು, "ಸ್ಥಳೀಯ ಭಾಷೆ ಬಳಕೆಯನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಉತ್ತೇಜಿಸುತ್ತಿದೆ. ಇದನ್ನು ಉಪಯೋಗಿಸಿಕೊಂಡು ಅತ್ಯುತ್ತಮವಾದ ವಿಷಯವನ್ನು ತಯಾರು ಮಾಡುವುದು ಎಲ್ಲಾ ಭಾರತೀಯ ಭಾಷಾ ತಜ್ಞರ ಜವಾಬ್ದಾರಿ" ಎಂದರು.
"ಶಿಕ್ಷಣದ ಜೊತೆ ಉದ್ಯಮ ಹಾಗೂ ಉದ್ಯಮಶೀಲತಾ ಸಾಮರ್ಥ್ಯವನ್ನು ಜೋಡಿಸುವ ನಮ್ಮ ಪ್ರಯತ್ನವನ್ನು ಕೇಂದ್ರದ ಬಜೆಟ್ ಇನ್ನಷ್ಟು ವಿಸ್ತರಣೆ ಮಾಡಿದೆ. ಇದರ ಫಲವಾಗಿ ಭಾರತ ಇಂದು ವೈಜ್ಞಾನಿಕ ಪ್ರಕಟಣೆಗಳಲ್ಲಿ ವಿಶ್ವದ ಮೂರನೇ ಅಗ್ರ ರಾಷ್ಟ್ರವಾಗಿ ಗುರುತಿಸಿಕೊಂಡಿದೆ" ಎಂದು ತಿಳಿಸಿದರು.
"ಯುವ ಜನತೆಯಲ್ಲಿ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ವಿಶ್ವಾಸ ಮೂಡಬೇಕು. ತಮ್ಮ ಶಿಕ್ಷಣ ಹಾಗೂ ಜ್ಞಾನದ ಮೇಲೆ ಯುವಜನರು ಸಂಪೂರ್ಣವಾದ ನಂಬಿಕೆಯನ್ನು ಹೊಂದಿದ್ದರೆ ಮಾತ್ರವೇ ವಿಶ್ವಾಸ ಮೂಡಲು ಸಾಧ್ಯ" ಎಂದರು.