ಬೆಳಗಾವಿ, ಮಾ 03 (DaijiworldNews/MS): ಕೆಲಸದ ಕೊಡಿಸುವ ನೆಪದಲ್ಲಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ , ರಾಜೀನಾಮೆ ಅಂಗೀಕರಿಸದಂತೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಬೀದಿಗಿಳಿದು ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮೇಶ್ ಜಾರಕಿಹೊಳಿಯವರ ರಾಜೀನಾಮೆ ಅಂಗೀಕರಿಸಬಾರದು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ರಾಸಲೀಲೆ ಸಿಡಿ ಪ್ರಕರಣ ರಮೇಶ್ ಜಾರಕಿಹೊಳಿ ವಿರುದ್ಧ ನಡೆದ ಷಡ್ಯಂತ್ರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಓರ್ವ ಬೆಂಬಲಿಗ ಮೈಮೇಲೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಬೆಂಬಲಿಗನನ್ನು ರಕ್ಷಿಸಿದ್ದಾರೆ. ಅಲ್ಲದೇ ಪ್ರತಿಭಟನೆ ನಡೆಸುತ್ತಿದ್ದ ರಮೇಶ್ ಜಾರಕಿಹೊಳಿ ಕೆಲ ಬೆಂಬಲಿಗರನ್ನು ವಶಕ್ಕೆ ಪಡೆದಿದ್ದಾರೆ.