ಜೈಪುರ, ಮಾ.03 (DaijiworldNews/MB) : 62 ವರ್ಷ ವಯಸ್ಸಿನ ಭಾರತೀಯ ಜನತಾ ಪಕ್ಷದ ಫೂಲ್ ಸಿಂಗ್ ಮೀನಾ ಅವರು ಬಿಎ ಪಾಸ್ ಮಾಡುವ ಮೂಲಕ ತಾನು ಪದವೀಧರ ಶಾಸಕನಾಗಬೇಕೆಂಬ ಕನಸ್ಸನ್ನು ನನಸಾಗಿದ್ದಾರೆ.
ಸಣ್ಣ ವಯಸ್ಸಿನಲ್ಲಿ ಶಾಲೆಯಿಂದ ದೂರವೇ ಇದ್ದ ಅವರು, ತನ್ನ ತಂದೆಯ ಮರಣದ ನಂತರ ಬೇಸಾಯವನ್ನು ಮಾಡುವುದು ಅನಿವಾರ್ಯವಾಗಿತ್ತು. ಅವರು ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆಯಲು ಮಾತ್ರ ಅವರಿಗೆ ಸಾಧ್ಯವಾಗಿತ್ತು. ಅವರ ಹೆಣ್ಣುಮಕ್ಕಳು ಶಿಕ್ಷಣದ ಮೌಲ್ಯದ ಬಗ್ಗೆ ಅರಿತು ತಮ್ಮ ತಂದೆಗೆ ಶಿಕ್ಷಣ ಪಡೆಯುವಂತೆ ಪ್ರೇರೇಪಿಸಿದ್ದು, ಮಕ್ಕಳ ಈ ಬೇಡಿಕೆಯು ಅವರ ಜೀವನವು ಬದಲಾಯಿಸಿದೆ. ಶಿಕ್ಷಣಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂಬ ಅಂಶವನ್ನು ಕೂಡಾ ಈ ಘಟನೆ ತಿಳಿಸಿದೆ.
ಫೂಲ್ ಸಿಂಗ್ ಮೀನಾ ಅವರು ಮಂಗಳವಾರ ಉದಯಪುರದ ರಾಜಕೀಯ ವಿಜ್ಞಾನ ವಿಭಾಗದಲ್ಲಿ ಬಿಎ ಅಂತಿಮ ವರ್ಷದ ಪರೀಕ್ಷೆಯನ್ನು ವರ್ಧಮಾನ ಮಹಾವೀರ ವಿಶ್ವವಿದ್ಯಾಲಯದಿಂದ ಪಡೆದರು.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, "ನನ್ನ ತಂದೆ ತೀರಿಕೊಂಡಿದ್ದರಿಂದ ನಾನು 7 ನೇ ತರಗತಿಯ ನಂತರ ಶಾಲೆಯಿಂದ ಹೊರಗುಳಿಯಬೇಕಾಯಿತು. ಕುಟುಂಬದಲ್ಲಿ ಅನೇಕ ಸವಾಲುಗಳಿದ್ದವು. ಕುಟುಂಬದ ಜೀವನೋಪಾಯಕ್ಕಾಗಿ ನಾನು ಕೃಷಿಯಲ್ಲಿ ತೊಡಗಿದೆ. ಇದರಿಂದ ನನಗೆ ಸಾಕಷ್ಟು ಆದಾಯ ಲಭಿಸದ ಕಾರಣ ನಾನು ಉದಯಪುರಕ್ಕೆ ಹೋಗಿ ಖಾಸಗಿ ಕಾರ್ಖಾನೆಗಳಿಗೆ ಕಾರ್ಮಿಕರನ್ನು ಪೂರೈಸುವ ಕೆಲಸ ಮಾಡಲು ಪ್ರಾರಂಭಿಸಿದೆ. ನಂತರ ನಾನು ರಾಜಕೀಯಕ್ಕೆ ಪ್ರವೇಶಿಸಿದೆ. ಬಳಿಕ ನಾನು ಎಂದಿಗೂ ಹಿಂದಿರುಗಿ ನೋಡಿಲ್ಲ'' ಎಂದು ಹೇಳಿದರು.
''ಒಂದು ದಿನ ನನ್ನ ಐದು ಮಕ್ಕಳು ನಾನು ಎಷ್ಟು ವಿದ್ಯಾಭ್ಯಾಸ ಪಡೆದಿದ್ದೇನೆ ಎಂದು ಕೇಳಿದರು. ಆಗ ನಾನು ಏಳನೇ ತರಗತಿ ಪಾಸ್ ಆಗಿದ್ದೇನೆ ಎಂದು ಹೇಳಿದೆ. ಅದಕ್ಕೆ ಅವರು ನೀವು ಈ ವಿಚಾರದಲ್ಲಿ ನಾಚಿಕೆಪಡುತ್ತಿಲ್ಲವೇ? ನೀವು ಶಾಸಕರಾಗಿರುವಾಗ ಇದು ಸರಿಯೇ? ಎಂದು ನನ್ನನ್ನು ಪ್ರಶ್ನಿಸಿದರು. ಅವರ ಮಾತುಗಳು ನನಗೆ ನಿಜವಾದ ಸ್ಫೂರ್ತಿಯಾಗಿದ್ದವು. 10 ನೇ ತರಗತಿಯ ಪರೀಕ್ಷೆ ಬರೆಯುವಂತೆ ಒತ್ತಾಯಿಸಿ ಶೀಘ್ರದಲ್ಲೇ ಅವರು ನನಗೆ ಅರ್ಜಿಯನ್ನು ತಂದು ಕೊಟ್ಟರು. ನಾನು 2013 ರಲ್ಲಿ ಪರೀಕ್ಷೆಗೆ ಹಾಜರಾಗಿದ್ದೆ. ಆದರೆ ನನಗೆ ಆಗ ಚುನಾವಣಾ ಟಿಕೆಟ್ ಲಭಿಸಿತ್ತು, ಅದು ಚುನಾವಣಾ ಸಮಯವಾಗಿದ್ದ ಕಾರಣ ನನಗೆ ಎರಡು ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗಲಿಲ್ಲ. 2015 ರಲ್ಲಿ ಮತ್ತೆ ಪರೀಕ್ಷೆ ಬರೆದು 10 ನೇ ತರಗತಿ ಪಾಸ್ ಆದೆ'' ಎಂದು ಹೇಳಿದರು.
"ನಂತರ ನಾನು 2016-17ರಲ್ಲಿ ನನ್ನ 12 ನೇ ತರಗತಿ ಪರೀಕ್ಷೆಯನ್ನು ಬರೆದು ಉತ್ತೀರ್ಣನಾದೆ. ಅಂತಿಮವಾಗಿ, ನಾನು ಆತ್ಮವಿಶ್ವಾಸದಿಂದ 2018-19ರಲ್ಲಿ ಬಿ.ಎ. ಪದವಿಮಾಡಲು ತೀರ್ಮಾನಿಸಿದೆ. ಈಗ ಪದವಿ ಪಡೆದಿದ್ದೇನೆ. ರಾಜಕೀಯದ ಜೊತೆಗೆ ಶಿಕ್ಷಣವೂ ಮುಖ್ಯವಾಗಿದೆ. ಆದ್ದರಿಂದ ನಾನು 40 ವರ್ಷಗಳ ನಂತರ ಮತ್ತೆ ಅಧ್ಯಯನ ಮಾಡಲು ಪ್ರಾರಂಭಿಸಿದೆ. ಬಿಎ ನಂತರ ನನ್ನ ಪಿಎಚ್ಡಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದೇನೆ" ಎಂದೂ 62 ವರ್ಷ ವಯಸ್ಸಿನ ಶಾಸಕರು ಹೇಳುತ್ತಾರೆ.
ಭೀಲ್ವಾರಾ ಜಿಲ್ಲೆಯ ಜಹಜಪುರ ತಹಸಿಲ್ ಗೋದಾವಳಿ ಗ್ರಾಮದಿಂದ ಮೀನಾ ಎರಡನೇ ಬಾರಿಗೆ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.