ಬೆಂಗಳೂರು, ಮಾ 03 (DaijiworldNews/MS): ಕೆಲಸದ ಕೊಡಿಸುವ ನೆಪದಲ್ಲಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾನು ಯಾವ ತಪ್ಪನ್ನು ಮಾಡಿಲ್ಲ, ನಾನೇಕೆ ರಾಜೀನಾಮೆ ಕೊಡಲಿ ಎಂದಿದ್ದ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ಬುಧವಾರ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಸೂಚನೆ ಮೇರೆಗೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ. ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋ ಸಿಡಿ ಬಿಡುಗಡೆ ಆದ ಬಳಿಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು.
ಸಚಿವರು ಯುವತಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಿದ್ದ ನಾಗರಿಕ ಹಕ್ಕು ಹೋರಾಟ ಸಮಿತಿಯ ದಿನೇಶ್ ಕಲ್ಲಹಳ್ಳಿ ಅವರು ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿಯ ರಾಜೀನಾಮೆಗೆ ಸ್ವಾಗತ ವ್ಯಕ್ತಪಡಿಸಿದ್ದಾರೆ.