ನವದೆಹಲಿ, ಮಾ 03 (DaijiworldNews/MS): ಭಾರತೀಯ ಜನತಾ ಪಕ್ಷವೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ, ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯಲು ಶತಾಯಗತಾಯ ಯತ್ನಿಸುತ್ತಿದ್ದು, ಇದಕ್ಕಾಗಿ ರಾಜಕೀಯ ನಾಯಕರು, ಹಾಗೂ ಸೆಲೆಬ್ರಿಟಿಗಳನ್ನು ತನ್ನತ್ತ ಸೆಳೆದುಕೊಳ್ಳಲು ನಾನಾ ಯತ್ನ ಮಾಡುತ್ತಿದೆ. ಇನ್ನೊಂದೆಡೆ ಇದಕ್ಕೆ ತಕ್ಕಂತೆ ಬಂಗಾಳದ ಹುಲಿ, ಸೌರವ್ ಗಂಗೂಲಿ 'ದಾದಾ' ಬಿಜೆಪಿ ಸೇರುವ ಬಗ್ಗೆ ವದಂತಿಗಳು ಕೇಳಿಬರುತ್ತಿದೆ.
ಬಿಸಿಸಿಐ ಅಧ್ಯಕ್ಷರ ನೇಮಕಾತಿಯಲ್ಲಿ ರಾಜಕೀಯ ಸ್ವರೂಪ ಮತ್ತು ಗಂಗೂಲಿ ಹಾಗೂ ಬಿಜೆಪಿಯ ಹಿರಿಯ ನಾಯಕರ ನಡುವಿನ ಸೌಹಾರ್ದಯುತ ಸಂಬಂಧದಿಂದಾಗಿ, ಜನಪ್ರಿಯ ಮಾಜಿ ಕ್ರಿಕೆಟಿಗ ಪಶ್ಚಿಮ ಬಂಗಾಳದಲ್ಲಿ 2021 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರ್ಪಡೆಯಾಗಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿದೆ.
ಮಾರ್ಚ್ 7 ರಂದು ಕೋಲ್ಕತ್ತಾದ ಬ್ರಿಗೇಡ್ ಮೈದಾನದಲ್ಲಿ ನಡೆಯಲಿರುವ ಪ್ರಧಾನ ಮಂತ್ರಿಗಳ ರ್ಯಾಲಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭಾಗವಹಿಸಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅವರು ಪ್ರಧಾನಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಬಹುದು ಎಂದು ಅಲ್ಲಿನ ಸ್ಥಳೀಯ ಮಾಧ್ಯಮ ನ್ಯೂಸ್ ಟೈಮ್ ಬಾಂಗ್ಲಾ ವರದಿ ಮಾಡಿದೆ.
ಆಂಜಿಯೋಪ್ಲ್ಯಾಸ್ಟಿಯ ಶಸ್ತ್ರಚಿಕಿತ್ಸೆಗೆ ಒಳಗಾದ ಸೌರವ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಅವರು ಆರೋಗ್ಯ ಸ್ಥಿತಿ ಅನುಕೂಲಕರವಾಗಿ ರ್ಯಾಲಿಗೆ ಬಂದರೆ ಅವರನ್ನು ಸ್ವಾಗತಿಸಲಾಗುವುದು ಎಂದು ಬಿಜೆಪಿ ವಕ್ತಾರ ಶಮಿಕ್ ಭಟ್ಟಾಚಾರ್ಯ ಕೋಲ್ಕತ್ತಾದಲ್ಲಿ ಮಾದ್ಯಮಕ್ಕೆ ತಿಳಿಸಿದ್ದಾರೆ.
ಬಿಸಿಸಿಐ ಅಧ್ಯಕ್ಷರು ಬಿಜೆಪಿಗೆ ಸೇರಬಹುದು ಎಂಬ ದಟ್ಟ ವದಂತಿಗಳಿದ್ದರೂ ಬಿಜೆಪಿ ಸೇರ್ಪಡೆ ಬಗ್ಗೆ ಸೌರವ್ ಗಂಗೂಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.