ನವದೆಹಲಿ, ಮಾ.03 (DaijiworldNews/MB) : ಫೆಬ್ರವರಿ 28ರಂದು ನಡೆದ ದೆಹಲಿಯ ಐದು ಪುರಸಭೆ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ನಡೆದಿದ್ದು ಈ ಐದು ವಾರ್ಡ್ಗಳ ಪೈಕಿ ನಾಲ್ಕು ವಾರ್ಡ್ಗಳನ್ನು ಆಮ್ ಆದ್ಮಿ ಪಕ್ಷ ತನ್ನ ತೆಕ್ಕೆಗೆ ಪಡೆದಿದ್ದು ಒಂದು ಸ್ಥಾನವನ್ನು ಮಾತ್ರ ಕಾಂಗ್ರೆಸ್ ಬಾಚಿದೆ.
ದೆಹಲಿಯ ಐದು ಪುರಸಭೆ ಉಪ ಚುನಾವಣೆಯು ಫೆಬ್ರವರಿ 28ರಂದು ನಡೆದಿದ್ದು ಶೇ. 50ಕ್ಕಿಂತ ಅಧಿಕ ಮತದಾನವಾಗಿತ್ತು. ಬುಧವಾರ ಬೆಳಿಗ್ಗೆ 9 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು ಸುಮಾರು 11 ಗಂಟೆಗೆ ಮುಕ್ತಾಯವಾಗಿದೆ.
ಬುಧವಾರ ದೆಹಲಿಯ ಶಾಲಿಮಾರ್ ಬಾಗ್, ಕಲ್ಯಾಣ್ಪುರಿ, ತ್ರಿಲೋಕ್ಪುರಿ ಮತ್ತು ರೋಹಿಣಿ- ಸಿ ವಾರ್ಡ್ ಮತ್ತು ಚೌಹಾಣ್ ಬಂಗಾರ್ ವಾರ್ಡ್ಗಳಲ್ಲಿ ಉಪ ಚುನಾವಣೆ ನಡೆದಿದ್ದು ಈ ಪೈಕಿ ಚೌಹಾಣ್ ಬಂಗಾರ್ ವಾರ್ಡ್ ಹೊರತುಪಡಿಸಿ ಉಳಿದೆಲ್ಲ ವಾರ್ಡ್ನಲ್ಲಿ ಆಪ್ ಗೆಲುವು ಸಾಧಿಸಿದೆ. ಆಪ್ ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಸಾಧಿಸಿ ಜಯಪಡೆದಿದೆ.