ಬೆಂಗಳೂರು, ಮಾ.03 (DaijiworldNews/PY): "ಮಕ್ಕಳು, ಫ್ಯಾಮಿಲಿ ಹೇಗೆ ನೋಡ್ತಾರೋ, ನಾವು ರಾಜಕಾರಣಿಗಳೆಂದು ಹೇಳಿಕೊಳ್ಳಲು ಅಸಹ್ಯವಾಗುತ್ತಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜನರು ನಮ್ಮನ್ನು ಛೀ, ಥೂ ಎಂದು ಉಗಿಯುತ್ತಿದ್ದಾರೆ. ಯಡಿಯೂರಪ್ಪನವರು ಭ್ರಷ್ಟಾ ಎಂದು ಆ ವಿಡಿಯೋದಲ್ಲಿ ಹೇಳಿದ್ದಾರೆ. ಈ ಬಗ್ಗೆ ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಉತ್ತರಿಸಬೇಕು. ನಾವು ಉತ್ತರ ಕೊಡುವ ಕಾಲ ಬರುತ್ತದೆ" ಎಂದಿದ್ದಾರೆ.
ಇನ್ನೊಂದೆಡೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಹೋದರನ ಪರ ಬ್ಯಾಟಿಂಗ್ ಮಾಡಿದ್ದು, "ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿಲ್ಲ. ಸಿಡಿಯಲ್ಲಿರುವ ಯುವತಿ ಯಾರು ಎಂದು ತಿಳಿಯಬೇಕಿದೆ. ಆಕೆಯ ಹೆಸರು ತಿಳಿಯಬೇಕು" ಎಂದು ಹೇಳಿದ್ದಾರೆ.
"ಸಿಡಿಯನ್ನು ಬಿಜೆಪಿಯವರು ರಿಲೀಸ್ ಮಾಡಿಸಿಲ್ಲ. ಬದಲಾಗಿ ಪ್ರಭಾವಿ ರಾಜಕಾರಣಿ ಇದ್ದಾರೆ. ಸಿಡಿ ರಿಲೀಸ್ ಮಾಡಿದವರು ವಿರುದ್ದ ನೂರು ಕೋಟಿ ಮಾನನಷ್ಟ ಮೊಕದ್ದಮೆ ಹಾಕಲು ತೀರ್ಮಾನ ಮಾಡಿದ್ದೇವೆ. ಈ ವಿಚಾರದ ಬಗ್ಗೆ ತನಿಖೆಯಾಗಲೇ ಬೇಕು. ರಮೇಶ್ ಜಾರಕಿಹೊಳಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ತನಿಖೆಯಾದ ಬಳಿಕ ರಾಜೀನಾಮೆ ನೀಡಿ ಹೊರ ಹೋಗಲಿ" ಎಂದಿದ್ದಾರೆ.