ಬೆಂಗಳೂರು, ಮಾ.03 (DaijiworldNews/MB) : ರಾಜ್ಯದ ಪ್ರಭಾವಿ ನಾಯಕ, ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿ.ಡಿ. ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಗದ್ದಲ ಎದ್ದಿದೆ. ರಾಜ್ಯದ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನೇ ಬುಡಮೇಳು ಮಾಡುವ ದೈರ್ಯ ತೋರಿದ್ದ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿಯನ್ನು ಮಂಗಳವಾರ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಬಿಡುಗಡೆ ಮಾಡಿದ್ದಾರೆ. ಅತ್ತ ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಬಿ.ಎಸ್.ವೈ ನೇತೃತ್ವದ ಬಿಜೆಪಿ ಸರ್ಕಾರವನ್ನು ಗೇಲಿ ಮಾಡುತ್ತಿದ್ದು ಇತ್ತ ಬಿಜೆಪಿಗೆ ರಾಸಲೀಲೆ ವಿಚಾರ ತಲೆ ನೋವಾಗಿ ಪರಿಣಮಿಸಿದೆ.
ಈ ವಿಚಾರದ ಬಗ್ಗೆ ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ಜಾರಕಿಹೊಳಿ ಅವರು, ''ದೇವರಾಣೆಗೂ ಆ ಯುವತಿ ಯಾರೆಂದು ನನಗೆ ತಿಳಿದಿಲ್ಲ. ಪಾಪ ಆಕೆ ಯಾವ ಹೆಣ್ಣುಮಗಳೋ ನನಗೆ ಗೊತ್ತಿಲ್ಲ. ಇವೆಲ್ಲವೂ ರಾಜಕೀಯ ಷಡ್ಯಂತ್ರ. ನಕಲಿ ವಿಡಿಯೋ ಸೃಷ್ಟಿಸಿ ನನ್ನನ್ನು ಸಿಲುಕಿಸುವ ಯತ್ನ ಮಾಡಲಾಗಿದೆ. ಈ ಬಗ್ಗೆ ತನಿಖೆಗೂ ನಾನು ಸಿದ್ದ'' ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೇ, ''ನಾನು ಅತ್ಯಂತ ಸೂಕ್ಷ್ಮ ಮನಸ್ಥಿತಿಯ ವ್ಯಕ್ತಿ. ಧಾರ್ಮಿಕವಾಗಿ ಅತೀವ ನಂಬಿಕೆ ನನಗೆ ಇದೆ. ನಮ್ಮದು ಅತ್ಯಂತ ದೊಡ್ಡ ಸಂಪ್ರದಾಯಸ್ಥ ಕುಟುಂಬ. ಕಳೆದ 21 ವರ್ಷದಿಂದ ಶಾಸಕನಾಗಿ ಆಯ್ಕೆಯಾಗಿರುವ ನಾನು ಮೊದಲ ಬಾರಿಗೆ ರಾಜಕೀಯ ಷಡ್ಯಂತ್ರದಲ್ಲಿ ಸಿಲುಕಿದ್ದೇನೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಫೋನ್ ಮಾಡಿ ಮನವಿ ಮಾಡಿದ್ದೇನೆ'' ಎಂದು ಹೇಳಿದ್ದಾರೆ.
ಇನ್ನು, ''ನಾನು ಯಾವುದೇ ತಪ್ಪು ಮಾಡಿಲ್ಲ ಎಂದಾಗ ತನಿಖೆಗೆ ನನಗೆ ಭಯವೇಕೇ? ನಾನೇಕೆ ರಾಜೀನಾಮೆ ನೀಡಬೇಕು?'' ಎಂದು ಪ್ರಶ್ನಿಸಿರುವ ಅವರು, ''ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಯಾವುದಕ್ಕೂ ನಾನು ಭಯ ಪಡಲ್ಲ. ತನಿಖೆಯಲ್ಲಿ ನಾನು ತಪ್ಪಿತಸ್ಥನೆಂದು ಸಾಬೀತಾದರೆ, ಸಚಿವ, ಶಾಸಕ ಎಲ್ಲಾ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ'' ಎಂದು ಹೇಳಿದ್ದಾರೆ.
ಮಂಗಳವಾರ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿಯನ್ನು ಬಿಡುಗಡೆ ಮಾಡಿದ್ದು ಜಲಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ರಮೇಶ್ ಜಾರಕಿಹೊಳಿ ಲೈಂಗಿಕ ಕಿರುಕುಳ ನೀಡಿದ್ದಾರೆ, ಅಧಿಕಾರ ದುರ್ಬಳಕೆ ಮಾಡಿ ಕಿರುಕುಳ ನೀಡಿ, ಬೆದರಿಕೆ ಹಾಕಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ. ಮಹಿಳೆ ತನ್ನ ಬಳಿ ಹೇಳಿಕೊಂಡಿರುವುದಾಗಿ ಹೇಳಿದ್ದಾರೆ.
ಬೆಂಗಳೂರು ನಗರದ ಕಬ್ಬನ್ ಪಾರ್ಕ್ ಬಳಿ ಇರುವ ಪೊಲೀಸ್ ಕಚೇರಿಗೆ ತೆರಳಿ ಡಿಸಿಪಿ ಅನುಚೇತ್ ಅವರಿಗೆ ದೂರು ನೀಡಲಾಗಿದ್ದರೂ ಎಫ್ಐಆರ್ ದಾಖಲಾಗಿಲ್ಲ ಎಂದು ಆರೋಪಿಸಿದ್ದಾರೆ.