ಬೆಂಗಳೂರು, ಮಾ.03 (DaijiworldNews/PY): "ಸಿಡಿಯಿಂದ ಆನೆಬಲ ಬಂದಿದೆ, ರಾಜೀನಾಮೆ ಕೊಡಲ್ಲ" ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಸಹೋದರನ ಪರ ಬ್ಯಾಟಿಂಗ್ ಮಾಡಿದ್ದಾರೆ.
"ಸಹೋದರನನ್ನು ರಾಜಕೀಯವಾಗಿ ಕುಗ್ಗಿಸಲು ಈ ರೀತಿಯಾದ ಬಲೆ ಹೆಣೆಯಲಾಗಿದೆ. ಇದೊಂದು ಫೇಕ್ ವಿಡಿಯೋ ಆಗಿದೆ. ಒಂದುವೇಳೆ ಸಿಡಿ ನಿಜವಾಗಿದ್ದರೆ ನಾನೇ ಖುದ್ದು ರಾಜೀನಾಮೆ ನೀಡಲು ಹೇಳುತ್ತೇನೆ" ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಪಡೆಯುವ ಬಗ್ಗೆ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ಇದರ ಬೆನ್ನಲ್ಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರಮೇಶ್ ಜಾರಕಿಹೊಳಿ ಅವರೊಂದಿಗೆ ನಿಂತಿದ್ದಾರೆ.
"ಅದೊಂದು ಫೇಕ್ ವಿಡಿಯೋ ಆಗಿದ್ದು, 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ವಿಡಿಯೋವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಚಾರವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗಿದೆ" ಎಂದಿದ್ದಾರೆ.
"ಇದು ಸೃಷ್ಟಿ ಮಾಡಿರುವ ನಕಲಿ ಸಿಡಿ ಆಗಿದೆ. ನಾವೆಲ್ಲರೂ ರಮೇಶ್ ಜಾರಕಿಹೊಳಿ ಅವರೊಂದಿಗಿದ್ದೇವೆ. ನಕಲಿ ಸಿಡಿಗೋಸ್ಕರ ರಾಜೀನಾಮೆ ನೀಡಿದ್ದೇ ಆದಲ್ಲಿ ಸಚಿವ ಸಂಪುಟವೇ ಖಾಲಿಯಾಗುತ್ತದೆ. ರಮೇಶ್ ಜಾರಕಿಹೊಳಿ ಅವರ ಕುಟುಂಬದ ವಿರುದ್ದ ರಾಜಕೀಯವಾದ ಷಡ್ಯಂತ್ರ ರೂಪಿಸಲಾಗಿದೆ" ಎಂದು ಆರೋಪಿಸಿದ್ದಾರೆ.
"ರಮೇಶ್ ಜಾರಕಿಹೊಳಿ ಕುಟುಂಬದ ವಿರುದ್ದ ಕಾಣದ ಶಕ್ತಿಗಳು ಷಡ್ಯಂತ್ರ ಮಾಡುತ್ತಿವೆ. ಸಿಎಂ ಅವರು ಇಂದು ಮಧ್ಯಾಹ್ನವೇ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಲಿದ್ದಾರೆ. ಅವಶ್ಯಕವಿದ್ದಲ್ಲಿ ಸುದ್ದಿಗೋಷ್ಠಿಯನ್ನು ಕೂಡಾ ನಡೆಸಲಿದ್ದಾರೆ. ಬಿಜೆಪಿಯ ಎಲ್ಲಾ ಶಾಸಕರು ರಮೇಶ್ ಜಾರಕಿಹೊಳಿ ಅವರ ಬೆಂಬಲವಾಗಿ ಇರುತ್ತೇವೆ. ಅವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ನಾವು ಸುಮ್ಮನೆ ಕುಳಿತರೆ ಆಗುವುದಿಲ್ಲ. ನಾವು ಇದರ ವಿರುದ್ದ ಕಾನೂನು ಹೋರಾಟ ಮಾಡುತ್ತೇವೆ" ಎಂದಿದ್ದಾರೆ.