ಬೆಂಗಳೂರು, ಮಾ 03 (DaijiworldNews/MS): ಕೃಷಿ ಸಚಿವ ಬಿ.ಸಿ ಪಾಟೀಲ್ ಮಂಗಳವಾರ , ಹಿರೇಕೆರೂರು ನಗರದಲ್ಲಿರುವ ತಮ್ಮ ನಿವಾಸದಲ್ಲೇ ಕೊರೊನಾ ಲಸಿಕೆ ಪಡೆದಿದ್ದು, ಅದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ರಾಜೇಂದ್ರ ದೊಡ್ಡಮನಿ ಮತ್ತು ತಾಲೂಕು ಆರೋಗ್ಯಾಧಿಕಾರಿ ಜೆಡ್. ಆರ್. ಮಕಾಂದಾರ್ ಅವರಿಗೆ ನೋಟಿಸ್ ನೀಡಲಾಗಿದೆ.
ಕೊರೊನಾವೈರಸ್ ಶಿಷ್ಟಾಚಾರದ ಉಲ್ಲಂಘಿಸಿದ ಕಾರಣ ಸಚಿವರ ಕ್ರಮವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಭೂಷಣ್ ತಿಳಿಸಿದ್ದು, ಈ ಘಟನೆಗೆ ಸಬಂಧಿಸಿದಂತೆ ವರದಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
"ಆರೋಗ್ಯ ಕಾರ್ಯಕರ್ತರನ್ನು ಮನೆಗೆ ಕರೆಯಿಸಿ ಕೊವಿಡ್-19 ಲಸಿಕೆ ಪಡೆದುಕೊಂಡಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದ್ದು, ಸಚಿವರ ಮನೆಗೆ ಹೋಗಿ ಲಸಿಕೆ ಹಾಕಿದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಮಂಗಳವಾರ ಹಿರೇಕೆರೂರುತಾಲೂಕು ಆರೋಗ್ಯಾಧಿಕಾರಿ ಮತ್ತು ಆರೋಗ್ಯ ಕಾರ್ಯಕರ್ತರನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ತಮ್ಮ ಮನೆಗೆ ಕರೆಸಿಕೊಂಡು ತಾವು ಮತ್ತು ತಮ್ಮ ಪತ್ನಿಗೆ ಕೊವಿಡ್-19 ಲಸಿಕೆ ಹಾಕಿಸಿಕೊಂಡಿದ್ದರು.