ಲಕ್ನೋ, ಮಾ.03 (DaijiworldNews/PY): ಬಿಜೆಪಿ ಸಂಸದ ಕೌಶಲ್ ಕಿಶೋರ್ ಪುತ್ರನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಮಡಿಯಾವ ಪ್ರದೇಶದಲ್ಲಿ ಮಾ.3ರ ಬುಧವಾರ ನಡೆದಿದೆ.
ಪ್ರಾಥಮಿಕ ವರದಿಯ ಪ್ರಕಾರ, ಕೌಶಲ್ ಕಿಶೋರ್ ಪುತ್ರ ಆಯುಷ್ (30) ಅವರು ಮುಂಜಾನೆ ವಾಯುವಿಹಾರಕ್ಕೆಂದು ತೆರಳಿದ್ದ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ಪರಿಣಾಮ ಆಯುಷ್ ಅವರ ಎದೆಯ ಭಾಗಕ್ಕೆ ಗಾಯವಾಗಿದ್ದು, ಸ್ಥಳಕ್ಕಾಗಮಿಸಿದ ಉತ್ತರಪ್ರದೇಶ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಗೆ ಹಳೆ ವೈಷ್ಯಮ್ಯ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರೆ.
ಈ ಬಗ್ಗೆ ಮಾಹಿತಿ ನೀಡಿರುವ ಕೌಶಲ್ ಕಿಶೋರ್ ಅವರು, "ಸದ್ಯ ಕಿಶೋರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಘಟನೆಯ ಬಗ್ಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ದುಷ್ಕರ್ಮಿಗಳನ್ನು ಶೀಘ್ರವೇ ಪತ್ತೆಹಚ್ಚುವ ಭರವಸೆ ಇದೆ" ಎಂದು ತಿಳಿಸಿದ್ದಾರೆ.