ನವದೆಹಲಿ, ಮಾ.03 (DaijiworldNews/MB) : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಮಾಡಿದ್ದು 'ತಪ್ಪು ನಿರ್ಧಾರ' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಭಿಪ್ರಾಯಿಸಿದ್ದು, ''ಆದರೆ ಕಾಂಗ್ರೆಸ್ ದೇಶದ ಸಾಂವಿಧಾನಿಕ ಚೌಕಟ್ಟನ್ನು ವಶಪಡಿಸುವ ಯತ್ನ ಮಾಡಿಲ್ಲ'' ಎಂದೂ ಹೇಳಿದರು.
ಅಮೇರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರ ಜೊತೆ ರಾಹುಲ್ ಗಾಂಧಿ ಅವರು ನಡೆಸಿದ ಸಂವಾದದಲ್ಲಿ ಹಲವು ವಿಚಾರಗಳನ್ನು ರಾಹುಲ್ ಗಾಂಧಿ ಹಂಚಿಕೊಂಡರು. ಈ ವೇಳೆ ಕೌಶಿಕ್ ಬಸು ಅವರು ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಬಗ್ಗೆ ರಾಹುಲ್ ಗಾಂಧಿ ಅವರ ಬಳಿ ಅಭಿಪ್ರಾಯ ಕೇಳಿದ್ದು, ''ನನ್ನ ಪ್ರಕಾರ ಅದೊಂದು ತಪ್ಪು ನಿರ್ಧಾರ. ಅದರಲ್ಲಿ ಯಾವುದೇ ಸಂಶಯವಿಲ್ಲ. ನನ್ನ ಅಜ್ಜಿ (ಇಂದಿರಾ ಗಾಂಧಿ) ಅವರು ಅದನ್ನೇ ಹೇಳಿದ್ದರು. ಆದರೆ ಆ ಸಂದರ್ಭದಲ್ಲಿ ಅವರು ಹೇರಿದ್ದ ತುರ್ತುಪರಿಸ್ಥಿತಿ ಹಾಗೂ ಈಗ ದೇಶದಲ್ಲಿ ನಡೆಯುತ್ತಿರುವ ಘಟನೆಗಳು ಮೂಲಭೂತವಾಗಿ ಬೇರೆಯೇ ಆಗಿದೆ. ಕಾಂಗ್ರೆಸ್ ಎಂದಿಗೂ ದೇಶದ ಸಂವಿಧಾನದ ಚೌಕಟ್ಟನ್ನು ವಶಕ್ಕೆ ಪಡೆಯುವ ಯತ್ನವನ್ನೂ ಮಾಡಿಲ್ಲ. ಅಷ್ಟಕ್ಕೂ ಕಾಂಗ್ರೆಸ್ಗೆ ಆ ಸಾಮಾರ್ಥ್ಯವೂ ಇಲ್ಲ'' ಎಂದು ರಾಹುಲ್ ಹೇಳಿದರು.
1991ರಲ್ಲಿ ನಡೆದ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಕುರಿತಾಗಿ ಮಾತನಾಡಿದ ಅವರು, ''ಇದು ನನಗೆ ಹಿಂಸಾಚಾರವನ್ನು ಅರ್ಥಮಾಡಿಕೊಳ್ಳಲು ಆಗಿದೆ. ಅಂದು ಅಪ್ಪ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದರು. ಆದ್ದರಿಂದ ಅವರನ್ನು ಹತ್ಯೆ ಮಾಡಲಾಗಿತ್ತು'' ಎಂದರು.
ಈ ವೇಳೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಬಗ್ಗೆ ಮಾತನಾಡಿದ ಅವರು, ''ಆರ್ಎಸ್ಎಸ್ ದೇಶದ ಸಾಂವಿಧಾನಿಕ ವ್ಯವಸ್ಥೆಯಲ್ಲಿ ತನಗೆ ಬೇಕಾದ ಜನರನ್ನು ಮಾತ್ರ ತುಂಬುವ ಯತ್ನ ಮಾಡುತ್ತಿದೆ. ನಾವು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬಹುದು ಆದರೆ ಆರ್ಎಸ್ಎಸ್ ಜನರಿಂದ ದೂರವಾಗಲು ಸಾಧ್ಯವಾಗದು'' ಎಂದೂ ಹೇಳಿದರು.