ಬೆಂಗಳೂರು, ಮಾ.03 (DaijiworldNews/PY): ಡ್ರಗ್ಸ್ ಜಾಲ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಸಂಜನಾ ಗರ್ಲಾನಿ ಹಾಗೂ ರಾಗಿಣಿ ದ್ವಿವೇದಿ ಸೇರಿದಂತೆ 25 ಮಂದಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಡ್ರಗ್ಸ್ ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿದ್ದ ಸಿಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಈಗಾಗಲೇ ಕೆಲವು ಮಂದಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.
ಪೊಲೀಸರು ಇದೀಗ ತನಿಖೆ ಪೂರ್ಣಗೊಳಿಸಿದ್ದು, 2,900 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
"ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ತಲೆಮರೆಸಿಕೊಂಡಿದ್ದಾರೆ. ಸಂಜನಾ ಗರ್ಲಾನಿ, ವಿರೇನ್ ಖನ್ನಾ ಹಾಗೂ ರಾಗಿಣಿ ದ್ವಿವೇದಿ ಸೇರಿದಂತೆ 25 ಮಂದಿ ಆರೋಪಿಗಳ ವಿರುದ್ದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, 180 ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖ ಮಾಡಲಾಗಿದೆ" ಎಂದು ಸಿಸಿಬಿ ಮೂಲಗಳು ತಿಳಿಸಿವೆ.