ಬೆಂಗಳೂರು, ಮಾ 03 (DaijiworldNews/MS): ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಬಜೆಟ್ ಅಧಿವೇಶನ ನಾಳೆಯಿಂದ (ಮಾ. 4) ಪ್ರಾರಂಭವಾಗಲಿದೆ. ಇನ್ನೊಂದೆಡೆ ರಾಜ್ಯ ಸರ್ಕಾರವನ್ನು ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ. ವಿವಾದ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಮೀಸಲಾತಿ ಹೋರಾಟ ಮತ್ತಿತರ ವಿಚಾರವಾಗಿ ಇಕ್ಕಟ್ಟಿಗೆ ಸಿಲುಕಿಸಿ ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಿದ್ದವಾಗಿದೆ.
ಒಟ್ಟು 19 ದಿನ ಕಲಾಪ ನಡೆಯಲಿದ್ದು, ಅಧಿವೇಶನ ಆರಂಭವಾಗುವ ಎರಡು ದಿನ ಬಾಕಿ ಇರುವಾಗಲೇ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ, ಸಿ.ಡಿ. ಬಾಂಬ್ ರಾಜ್ಯ ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷಗಳ ಪ್ರಮುಖ ಬತ್ತಳಿಕೆಯಾಗಲಿದೆ.
ಮಾ. 4ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮೊದಲ ಎರಡು ದಿನ ‘ಗುಜರಾತ್ನ ಕೆವಾಡಿಯಾದಲ್ಲಿ ನಡೆದಿದ್ದ ಸ್ಪೀಕರ್ಗಳ ಸಮ್ಮೇಳನದ ನಿರ್ಣಯದಂತೆ ‘ಒಂದು ರಾಷ್ಟ್ರ– ಒಂದು ಚುನಾವಣೆ’ ಕುರಿತು ಚರ್ಚೆ ನಡೆಯಲಿದೆ. ಮಾ. 8ರಂದು ಬಜೆಟ್ ಮಂಡನೆಯಾಗಲಿದ್ದು, ಅನಂತರ ಮಾ. 31ರ ವರೆಗೆ ಬಜೆಟ್ ಮೇಲಿನ ಚರ್ಚೆ, ಸರಕಾರದ ಉತ್ತರ, ಪ್ರಶ್ನೋತ್ತರ ಕಲಾಪಗಳು ಇರಲಿವೆ .ಈ ಅಧಿವೇಶನದಲ್ಲಿ ಕರ್ನಾಟಕ ಪೌರಸಭೆಗಳ ಮಸೂದೆ–2021, ಸೊಸೈಟಿಗಳ ನೋಂದಣಿ ಮಸೂದೆ–2021 ಮತ್ತು ಲೇವಾದೇವಿದಾರರ ನೋಂದಣಿ ಮಸೂದೆ–2021ರ ಮಂಡನೆ ಆಗಲಿದೆ.
ಇನ್ನೊಂದೆಡೆ ಅಧಿವೇಶನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡಾ ಶಾಸಕಾಂಗ ಪಕ್ಷದ ಸಭೆ ನಡೆಸಿ ಸರಕಾರದ ವಿರುದ್ಧ ಮುಗಿಬೀಳುವ ವಿಚಾರದಲ್ಲಿ ಕಾರ್ಯತಂತ್ರ ರೂಪಿಸಲಿದೆ.