ಬೆಂಗಳೂರು, ಮಾ. 02 (DaijiworldNews/SM): ಸಚಿವ ರಮೇಶ್ ಜಾರಕಿಹೊಳಿಯರವ ಅಶ್ಲೀಲ ಸಿಡಿ ಬಿಡುಗಡೆಯಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದೆ. ಅಶ್ಲೀಲ ವೀಡಿಯೋದಿಂದಾಗಿ ಸರಕಾರಕ್ಕೆ ಮುಜುಗರವುಂಟಾಗಿದೆ. ಈ ಹಿನ್ನೆಲೆ ಸಚಿವ ಜಾರಕಿಹೊಳಿ ರಾಜೀನಾಮೆ ಪಡೆಯುವುದು ಬಹುತೇಕ ಪಕ್ಕ ಎನ್ನಲಾಗಿದೆ.
ಸಚಿವ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷ ಹಾಗೂ ಸಂಘಪರಿವಾರದಿಂದ ಆಗ್ರಹಗಳು ಕೇಳಿಬಂದಿವೆ ಎನ್ನಲಾಗಿದೆ. ಇದೇ ಕಾರಣದಿಂದ ಮಾರ್ಚ್ 3ರ ಬುಧವಾರದಂದು ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಕೈಗೊಂಡು ಸಚಿವರ ತಲೆದಂಡವಾಗುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.
ಮತ್ತೊಂದೆಡೆ ಬಜೆಟ್ ಅಧಿವೇಶ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ರಾಸಲೀಲೆ ಪ್ರಕರಣವನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಇದು ಸರಕಾರಕ್ಕೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಸರಕಾರ ಜಾರಕಿಹೊಳಿಯವರ ರಾಜೀನಾಮೆ ಪಡೆದು ಕೈತೊಳೆದುಕೊಳ್ಳುವ ಪ್ರಯತ್ನ ಮಾಡಲಿದೆ. ಆದರೆ, ಪ್ರತಿಪಕ್ಷಗಳು ಮಾತ್ರ ಈ ವಿಚಾರವನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿವೆ. ಸದ್ಯ ಎಲ್ಲರ ಚಿತ್ತ ಬುಧವಾರ ನಡೆಯುವ ಸಚಿವ ಸಂಪುಟ ಸಭೆಯತ್ತ ನೆಟ್ಟಿದೆ.