ಶಿವಮೊಗ್ಗ, ಮಾ.02 (DaijiworldNews/HR): "ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಹಾಗೂ ಅವರ ಕುಟುಂಬವನ್ನು ಜನರೇ ದೇಶದಿಂದ ಹೊರಹಾಕಿದ್ದಾರೆ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದ ಜನರು ಬಿಜೆಪಿ ಹಾಗೂ ಮೋದಿಯವರ ಜೊತೆಗೆ ಇರುತ್ತಾರೆ. ಪ್ರಧಾನಿ ಮೋದಿಯವರನ್ನು ದೇಶದ ಜನರೇ ಬೇಕು ಎಂದು ತೀರ್ಮಾನ ಮಾಡಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಅವರು ಹೇಳಿದ್ದನ್ನು ಜನರು ನಂಬುವುದಿಲ್ಲ ಹಾಗೂ ಒಪ್ಪಿಕೊಳ್ಳುವುದಿಲ್ಲ" ಎಂದರು.
ಇನ್ನು "ಭದ್ರಾವತಿಯಲ್ಲಿ ಕಬ್ಬಡಿ ಪಂದ್ಯಾವಳಿ ವೇಳೆ ನಡೆದ ಗಲಾಟೆ ವಿಚಾರವಾಗಿ ಮಾತನಾಡಿದ ಅವರು, "ರನ್ನರ್ಸ್ ಅಪ್ ಆದ ತಂಡ ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಘೋಷಣೆಗಳನ್ನು ಕೂಗಿದ್ದು, ಇದನ್ನು ವಿರೋಧಿಸಿ ಶಾಸಕರ ಬೆಂಬಲಿಗರು ಹಲ್ಲೆ ನಡೆಸಿದ್ದು, ಈ ವಿಷಯ ಕೇಳಿ ನನಗೆ ಆಶ್ಚರ್ಯವಾಯಿತು. ಈ ರೀತಿಯ ಗುಂಡಾಗಿರಿಯನ್ನು ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ಸಹಿಸುವುದಿಲ್ಲ" ಎಂದು ಹೇಳಿದ್ದಾರೆ.