ಮುಂಬೈ, ಮಾ.02 (DaijiworldNews/MB) : ದೇಶದಲ್ಲಿ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟಿಗೆ ಕೊಡಲಿ ಏಟಾಗಿ ಪರಿಣಮಿಸಿದ ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಲಕ್ಷಾಂತರ ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡು ಈಗಲೂ ಬೇರೆ ಉದ್ಯೋಗದ ಅಲೆದಾಟದಲ್ಲೇ ಇದ್ದಾರೆ. ಏತನ್ಮಧ್ಯೆ ಈ ಕೊರೊನಾ ಕಾಲದಲ್ಲೂ ಬಿಲಿಯನೇರ್ ಕ್ಲಬ್ಗೆ ಭಾರತದ ಬರೋಬ್ಬರಿ 40 ಮಂದಿ ಸೇರ್ಪಡೆಯಾಗಿದ್ದಾರೆ.
ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಅದೇಷ್ಟೋ ಜನ ಆರ್ಥಿಕ ತೊಂದರೆಗೆ ಒಳಗಾಗಿದ್ದಾರೆ. ಆದರೆ ದೇಶದಲ್ಲಿ ಬಂಡವಾಳಶಾಹಿಗಳ ಆದಾಯ ಮಾತ್ರ ಯಾವುದೇ ಅಡೆತಡೆ ಇಲ್ಲದೆ ಏರಿಕೆಯಾಗುತಲೇ ಇದೆ. ಹೊಸದಾಗಿ 40 ಮಂದಿ ಭಾರತೀಯರು ಬಿಲಿಯನೇರ್ ಪಟ್ಟಿಗೆ ಸೇರ್ಪಡೆಯಾಗುವುದರ ಜೊತೆಗೆ ಭಾರತದಲ್ಲಿ ಬಿಲಿಯನೇರ್ಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು 83 ಬಿಲಿಯನ್ ಅಮೇರಿಕನ್ ಡಾಲರ್ನೊಂದಿಗೆ ಶ್ರೀಮಂತ ಭಾರತೀಯರಾಗಿ ಮುಂದುವರೆದಿದ್ದು ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯ ಪ್ರಕಾರ, ಮುಖೇಶ್ ಅಂಬಾನಿ ಆದಾಯ ಶೇಕಡಾ 24 ರಷ್ಟು ಏರಿಕೆಯಾಗಿದೆ. ವಿಶ್ವದ ಎಂಟನೇ ಶ್ರೀಮಂತರಾಗಿದ್ದಾರೆ.
ಇನ್ನು ಗುಜರಾತ್ನ ಗೌತಮ್ ಅದಾನಿ ಅವರ ಸಂಪತ್ತು ಕೂಡಾ ಹೆಚ್ಚಳವಾಗಿದೆ. 2020ರಲ್ಲಿ 32 ಬಿಲಿಯನ್ ಡಾಲರ್ಗೆ ದ್ವಿಗುಣಗೊಂಡಿದ್ದು ಎರಡನೇ ಶ್ರೀಮಂತ ಭಾರತೀಯರಾಗಿದ್ದಾರೆ. ಜಾಗತಿಕವಾಗಿ 20 ಸ್ಥಾನಗಳನ್ನು ಏರಿ 48ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಹುರುನ್ ವರದಿಯ ಪ್ರಕಾರ ಇಡೀ ದೇಶವೇ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರೂ ಭಾರತೀಯ ಬಿಲಿಯನೇರ್ಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.