ಮಾಲ್ಡಾ, ಮಾ.02 (DaijiworldNews/MB) : ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಜಯಂತಿ ದಿನ ಸಮಾರಂಭದಲ್ಲಿ ಕೆಲವರು ಜೈ ಶ್ರೀರಾಮ್ ಘೋಷಣೆ ಕೂಗಿದ ಕಾರಣ ಭಾಷಣ ಮಾಡದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೆರಳಿರುವ ಘಟನೆಯನ್ನು ಉಲ್ಲೇಖ ಮಾಡಿ ಮಾತನಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ''ರಾಮನನ್ನು ವಿರೋಧಿಸುವವರಿಗೆ ಬಂಗಾಳದಲ್ಲಿ ಯಾವುದೇ ಅವಕಾಶವಿಲ್ಲ'' ಎಂದು ಹೇಳಿದ್ದಾರೆ.
ಮಾಲ್ಡಾದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ ಯೋಗಿ ಅವರು, ''ಜೈ ಶ್ರೀರಾಮ್ ಘೋಷಣೆ ಕೂಗುವ ಅವಕಾಶವೂ ರಾಜ್ಯದಲ್ಲಿ ಇಲ್ಲದಿರುವ ಈ ಸಂದರ್ಭದಲ್ಲಿ ಇದೇ ಪದ್ದತಿ ಮುಂದುವರಿಯಲು ಇಲ್ಲಿನ ಜನರು ಬಿಡಲಾರರು. ಒಂದು ಕಾಲದಲ್ಲಿ ದೇಶವನ್ನೇ ಮುನ್ನಡೆಸಿದ ಕೀರ್ತಿ ಹೊಂದಿರುವ ಬಂಗಾಳವು ಈಗ ಟಿಎಂಸಿ ಸರ್ಕಾರದಿಂದಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದೆ'' ಎಂದರು.
''ಭಗವಾನ್ ರಾಮನ ಭಕ್ತರ ಮೇಲೆ ಗುಂಡು ಹಾರಿಸಿದ ಸರ್ಕಾರ ಅಯೋಧ್ಯೆಯಲ್ಲಿ ಇತ್ತು. ಆ ಸರ್ಕಾರ ಬಳಿಕ ಏನಾಯಿತೆಂದು ಎಲ್ಲರೂ ತಿಳಿದಿದ್ದಾರೆ. ಈಗ ಬಂಗಾಳದಲ್ಲಿ ಟಿಎಂಸಿ ಸರ್ಕಾರದ ಸ್ಥಿತಿಯೂ ಅದೇ ಆಗಲಿದೆ ಎಂದು ನಾನು ಮಮತಾ ದೀದಿಗೆ ತಿಳಿಸಲು ಇಚ್ಛಿಸುತ್ತೇನೆ'' ಎಂದು ಹೇಳಿದರು.