ತಿರುವನಂತಪುರ, ಮಾ.02 (DaijiworldNews/HR): "2016ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡ ನೋಟು ಬ್ಯಾನ್ ನಿರ್ಧಾರದಿಂದಾಗಿ ದೇಶದಲ್ಲಿ ನಿರುದ್ಯೋಗ ಹೆಚ್ಚಿದದು, ಅನೌಪಚಾರಿಕ ವಲಯಗಳು ಸಂಕಷ್ಟಕ್ಕೆ ಸಿಲುಕಿವೆ" ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಕೇರಳದ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವೆಲಂಪ್ಮೆಂಟ್ ಸ್ಟಡೀಸ್ 'ಪ್ರತೀಕ್ಷಾ 2030' ಶೀರ್ಷಿಕೆಯಡಿ ಆಯೋಜಿಸಿದ್ದ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರವು ಯೋಜನೆ ಮತ್ತು ಇತರೆ ವಿಷಯಗಳ ಕುರಿತು ರಾಜ್ಯಗಳೊಂದಿಗೆ ನಿಯಮಿತವಾಗಿ ಸಮಾಲೋಚನೆಯನ್ನು ಕೂಡ ನಡೆಸುವುದಿಲ್ಲ" ಎಂದು ಟೀಕಿಸಿದ್ದಾರೆ.
ಇನ್ನು "ಭಾರತ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ತಾತ್ಕಾಲಿಕ ಪರಿಹಾರ ಕ್ರಮಗಳ ಮೂಲಕ ಸಣ್ಣ ಮತ್ತು ಮಧ್ಯಮ ವಲಯಗಳಲ್ಲಿ ಎದುರಾಗಿರುವ ಸಾಲದ ಬಿಕ್ಕಟ್ಟನ್ನು ಮರೆಮಾಚಲು ಸಾಧ್ಯವಿಲ್ಲ. ಕೇರಳ ಹಾಗೂ ಇತರ ಕೆಲವು ರಾಜ್ಯಗಳು ಅತಿಯಾದ ಸಾಲದ ಹೊರೆಗೆ ಸಿಲುಕಿದ್ದು, ಇದರಿಂದಾಗಿ ಸಾರ್ವಜನಿಕ ಹಣಕಾಸು ವ್ಯವಸ್ಥೆ ಅಸ್ತವ್ಯಸ್ತವಾಗಿದೆ" ಎಂದು ಹೇಳಿದ್ದಾರೆ.