ನವದೆಹಲಿ, ಮಾ.02 (DaijiworldNews/MB) : ಸಾಗರಮಾಲಾ ಯೋಜನೆಯಡಿ 2015ರಿಂದ 2035ರ ಅವಧಿಯಲ್ಲಿ ಬಂದರು ಯೋಜನೆಗಳಲ್ಲಿ 8,200 ಕೋಟಿ ಡಾಲರ್ ಹೂಡಿಕೆ ಮಾಡಲಾಗುವುದು. ಅದಕ್ಕಾಗಿ 574ಕ್ಕಿಂತಲೂ ಗುರುತಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಈ ಬಗ್ಗೆ ಭಾರತೀಯ ಸಾಗರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ''ಸರ್ಕಾರವು 2030ರ ಒಳಗಾಗಿ 23 ಜಲಮಾರ್ಗಗಳನ್ನು ಕಾರ್ಯಾಚರಣೆಗೆ ಸಿದ್ದ ಮಾಡುವ ಬಗ್ಗೆ ಚಿಂತಿಸಿದೆ. ಈ ಹಿಂದೆ ಯಾರೂ ಜಲಮಾರ್ಗಕ್ಕೆ ಮಾಡಿರದಷ್ಟು ಹೂಡಿಕೆಯನ್ನು ನಮ್ಮ ಸರ್ಕಾರ ಮಾಡುತ್ತಿದೆ'' ಎಂದರು.
ಜಾಗತಿಕ ಉದ್ಯಮಿಗಳಿಗೆ ಭಾರತದ ಬಂದರುಗಳು, ಹಡಗುಗಟ್ಟೆಗಳು ಹಾಗೂ ಜಲಮಾರ್ಗಗಳಲ್ಲಿ ಹೂಡಿಕೆ ಮಾಡಲು ಹೇಳಿದ ಅವರು, ''ದೇಶೀಯ ಜಲಮಾರ್ಗಗಳು ಸರಕುಗಳ ಸಾಗಣೆಗೆ ಉತ್ತಮವೆಂದು ತಿಳಿದುಬಂದಿದೆ. ಇದಕ್ಕೆ ವೆಚ್ಚ ಕಡಿಮೆ, ಹಾಗೆಯೇ ಇದು ಪರಿಸರ ಸ್ನೇಹಿ'' ಎಂದು ತಿಳಿಸಿದರು.
''ಸಾಗರ ಮೂಲದಿಂದ ಶುದ್ಧ ನವೀಕರಿಸಬಹುದಾದ ಇಂಧನದ ಪಾಲು ಹೆಚ್ಚಿಸುವುದು, ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುವುದು, ದೀಪಸ್ತಂಭಗಳ ಸುತ್ತಲಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು, ಬಂದರು ಅಭಿವೃದ್ಧಿ ಯೋಜನೆಗಳಲ್ಲಿ ಒಳಗೊಳ್ಳಲಿವೆ'' ಎಂದರು.