ಬೆಂಗಳೂರು, ಮಾ.02 (DaijiworldNews/HR): "ಸರ್ಕಾರವು ಸಾರಿಗೆ ನೌಕರರಿಗೆ ಸರ್ಕಾರ ಕೊಟ್ಟ ಭರವಸೆ ಮಾ.15ರಂದು ಗಡುವು ಮುಕ್ತಾಯವಾಗಲಿದ್ದು, ನೌಕರರ ಬೇಡಿಕೆ ಈಡೇರಿಸದೆ, ಸರ್ಕಾರ ವಚನ ಭ್ರಷ್ಟವಾಗಬಾರದು" ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸರ್ಕಾರವು ನೌಕರರ ಒಂಭತ್ತು ಬೇಡಿಕೆ ಈಡೇಸುತ್ತೇವೆ ಎಂದು ಲಿಖಿತ ಭರವಸೆ ಕೊಟ್ಟು ಈಗ ಸುಮ್ಮನಾಗಿದೆ. ಸರ್ಕಾರಕ್ಕೆ ನೀಡಿದ ಮೂರು ತಿಂಗಳ ಗಡುವು ಮಾರ್ಚ್ 15ರಂದು ಮುಗಿಯುತ್ತದೆ. ಹೀಗಾಗಿ ಸರ್ಕಾರವನ್ನು ಎಚ್ಚರಿಸಲು ಸಾಂಕೇತಿಕವಾಗಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಶೀಘ್ರ ಆರನೇ ವೇತನ ಆಯೋಗ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು" ಎಂದರು.
ಇನ್ನು "ಸಚಿವ ಲಕ್ಷ್ಮಣ ಸವದಿ, ತಪ್ಪು ಮಾತುಗಳನ್ನು ಆಡಬಾರದು, ಜವಾಬ್ದಾರಿ ಮಂತ್ರಿಯಾಗಿ ಮಾತನಾಡಬೇಕು. ಒಂಭತ್ತು ಬೇಡಿಕೆಯಲ್ಲಿ ಯಾವುದು ಕಾರ್ಯಗತವಾಗಿದೆ ಎಂಬುದನ್ನು ತಿಳಿಸಬೇಕು. ಮಾತಿನಲ್ಲಿ ಹೊಟ್ಟೆ ತುಂಬುವುದಿಲ್ಲ ಸ್ಪಷ್ಟ ಆದೇಶ ಹೊರಡಿಸಬೇಕು" ಎಂದು ಹೇಳಿದ್ದಾರೆ.
"ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾರಿಗೆ ನೌಕರರ ಮನವಿಗೆ ಸ್ಪಂದಿಸಬೇಕು. ಹೊಸ ಬಸ್ ಗಳನ್ನು ಸಾಲ ಮಾಡಿ ಖರೀದಿಸುವ ಮನಸ್ಸು ಮಾಡುತ್ತಿರುವ ಸರ್ಕಾರ, ಸಾರಿಗೆ ನೌಕರರ ಬೇಡಿಕೆ ಏಕೆ ಈಡೇರಿಸಿಲ್ಲ?" ಎಂದು ಪ್ರಶ್ನಿಸಿದ್ದಾರೆ.