ಚಿಕ್ಕಮಗಳೂರು,ಮಾ 02 (DaijiworldNews/MS): "ರಾಹುಲ್ ಗಾಂಧಿ ಕಾಲಿಟ್ಟ ಪ್ರದೇಶದಲ್ಲೆಲ್ಲಾ ಕಾಂಗ್ರೆಸ್ ನೆಲಕಚ್ಚುತ್ತಿದೆ. ಕಾಂಗ್ರೆಸ್ ನಾಯಕರಿಗೆ ಸಾಲು ಸಾಲು ಸೋಲಿನಿಂದ ಬುದ್ದಿಭ್ರಮಣೆಯಾಗಿದ್ದು, ಹೀಗಾಗಿ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ" ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕುಹಕವಾಡಿದ್ದಾರೆ.
ಬ್ರಿಟಿಷರನ್ನು ದೇಶ ಬಿಟ್ಟು ಓಡಿಸಿದವರಿಗೆ ನರೇಂದ್ರ ಮೋದಿಯನ್ನು ಓಡಿಸುವುದು ಕಷ್ಟಕರವಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ''ರಾಹುಲ್ ಗಾಂಧಿಗೆ ಚಿಕಿತ್ಸೆಯ ನೀಡುವ ಅಗತ್ಯವಿದೆ. ಚುನಾವಣೆಗಾಗಿ ನೀರಿಗಿಳಿಯೋದು, ಹಾಡು ಹೇಳೋದು, ಡ್ಯಾನ್ಸ್ ಮಾಡುವುದನ್ನು ನೋಡಬಹುದಾಗಿದೆ. ರಾಹುಲ್ ಗಾಂಧಿ ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ನೆಲಕಚ್ಚುತ್ತಾ ಹೋಗುತ್ತಿದೆ. ಗೆಲುವು ಕಾಣದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ದೊರಕಿಲ್ಲ'' ಎಂದು ಟೀಕಿಸಿದ್ದಾರೆ.
''ಮುಂಬರುವ 4 ರಾಜ್ಯದ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ. ಇನ್ನು ಯಾವ ರಾಜ್ಯದಲ್ಲೂ ಕಾಂಗ್ರೆಸ್ ಅಸ್ತಿತ್ವ ಉಳಿಯುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ನಾನಾ ರೀತಿಯ ನಾಟಕವಾಡಿ ಬಳಿಕ ವಿದೇಶಕ್ಕೆ ಓಡಿ ಹೋಗುತ್ತಾರೆ'' ಎಂದು ವ್ಯಂಗ್ಯವಾಡಿದ್ದಾರೆ.