ಆಗ್ರಾ, ಮಾ.02 (DaijiworldNews/MB) : ದೋಷಿಯಾಗಿ ಜೈಲು ವಾಸ ಅನುಭವಿಸುತ್ತಿದ್ದ ವ್ಯಕ್ತಿಯು ನಿರಪರಾಧಿ ಎಂದು ಸುದೀರ್ಘ 20 ವರ್ಷಗಳ ಬಳಿಕ ಅಲಹಾಬಾದ್ ಹೈಕೋರ್ಟ್ ಘೋಷಿಸಿದೆ.
ವಿಷ್ಣು ತಿವಾರಿ ಎಂಬಾತ ಅತ್ಯಾಚಾರದ ಆರೋಪಿಯಾಗಿದ್ದು ಆತನಿಗೆ ವಕೀಲರನ್ನು ನೇಮಿಸಿಕೊಳ್ಳುವಷ್ಟು ಆರ್ಥಿಕ ಸಬಲತೆ ಇರಲಿಲ್ಲ. ವಿಷ್ಣು ತಿವಾರಿಗೆ ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದಾಗ ಆತ 23 ವರ್ಷ ಪ್ರಾಯದವನಾಗಿದ್ದ. ಆತ ತಾನು ಅತ್ಯಾಚಾರವೆಸಗಿಲ್ಲ ಎಂದು ಸಾಬೀತು ಪಡಿಸುವುದೊಂದೇ ಆತನಿಗೆ ಜೈಲು ವಾಸದಿಂದ ತಪ್ಪಿಸಿಕೊಳ್ಳಲು ಇದ್ದ ಮಾರ್ಗವಾಗಿತ್ತು.
ಆದರೆ ಈಗ 20 ಸುದೀರ್ಘ ವರ್ಷಗಳ ನಂತರ ಅಂದರೆ ಆತನ ಕುಟುಂಬದ ಎಲ್ಲರೂ ಸಾವನ್ನಪ್ಪಿದ ಬಳಿಕ ಅಲಹಾಬಾದ್ ಹೈಕೋರ್ಟ್ ಆತನನ್ನು ನಿರಪರಾಧಿ ಎಂದು ಘೋಷಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆಗ್ರಾ ಕೇಂದ್ರ ಕಾರಾಗೃಹದ ಹಿರಿಯ ಅಧೀಕ್ಷಕ ವಿ.ಕೆ.ಸಿಂಗ್, ''ವಿಷ್ಣು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ. ನಾವು ಬಿಡುಗಡೆ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಅವರು ಎಂದಿಗೂ ಮಾಡದ ಅಪರಾಧಕ್ಕಾಗಿ ಅವರು ಎರಡು ದಶಕಗಳ ಕಾಲ ಜೈಲಿನಲ್ಲಿಇರಬೇಕಾಗಿರುವುದು ದುರದೃಷ್ಟಕರ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಷ್ಣುವಿನ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದದ್ದು 2000 ದ ಇಸವಿಯಲ್ಲಿ. ವಿಷ್ಣು ತನ್ನ ತಂದೆ ಹಾಗೂ ಸಹೋದರರೊಂದಿಗೆ ಯುಪಿಯ ಲಲಿತ ಪುರದಲ್ಲಿ ವಾಸಿಸುತ್ತಿದ್ದ. ತನ್ನ ಕುಟುಂಬಕ್ಕೆ ಆರ್ಥಿಕ ಸಹಾಯದ ಅವಶ್ಯಕತೆ ಇದ್ದ ಕಾರಣ ಆತ ತನ್ನ ವಿದ್ಯಾಭ್ಯಾಸ ತೊರೆದು ಕೆಲಸಕ್ಕೆ ಸೇರಿಕೊಂಡ. ಸೆಪ್ಟೆಂಬರ್ ತಿಂಗಳಿನಲ್ಲಿ ಸುಮಾರು ೩೦ ಕಿ.ಮೀ. ದೂರದಲ್ಲಿರುವ ಸಿಲ್ವಾನ್ ಗ್ರಾಮದ ಮಹಿಳೆಯೊಬ್ಬಾಕೆ ಆತನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದು ಈ ಬಗ್ಗೆ ದೂರು ದಾಖಲಾಗಿತ್ತು. ನ್ಯಾಯಾಲಯವು ಈತನನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು.
''2003 ರಲ್ಲಿ ಆತನನ್ನು ಆಗ್ರಾದ ಜೈಲಿಗೆ ವರ್ಗಾಯಿಸಲಾಗಿತ್ತು. ಜೈಲಿನಲ್ಲಿ ಆತನನ್ನು ಸೌಮ್ಯ ಸ್ವಭಾವದ ವ್ಯಕ್ತಿ, ಸ್ವಚ್ಛತೆಯ ವ್ಯಕ್ತಿ, ಪ್ರತಿಭಾನ್ವಿತ ಅಡುಗೆಗಾರ ಎಂದೆಲ್ಲಾ ಕರೆಯಲಾಗುತ್ತಿತ್ತು. ಅಡುಗೆ ಮಾಡುವುದು ಮಾತ್ರವಲ್ಲದೇ ಆತ ಜೈಲಿನಲ್ಲಿ ಶುಚಿತ್ವವನ್ನೂ ಮಾಡುತ್ತಿದ್ದ. ಅವರ ನಡವಳಿಕೆ ಯಾವಾಗಲೂ ಉತ್ತಮವಾಗಿತ್ತು'' ಎನ್ನುತ್ತಾರೆ ವಿ.ಕೆ.ಸಿಂಗ್.
2005 ರಲ್ಲಿ ಆತ ಹೈಕೋರ್ಟ್ ಕದ ತಟ್ಟಲು ನಿರ್ಧರಿಸಿದ್ದು ಆದರೆ ಅದು ಸಾಧ್ಯವಾಗಲಿಲ್ಲ. ಏತನ್ಮಧ್ಯೆ ಸುಮಾರು 6 ವರ್ಷದಿಂದ ಆತನ ತಂದೆಯೂ ಆತನನ್ನು ನೋಡಲು ಬರುತ್ತಿರಲಿಲ್ಲ. ಬಳಿಕ ಆತನ ತಂದೆ ನಿಧನ ಹೊಂದಿರುವ ಸುದ್ದಿ ಅವನಿಗೆ ತಿಳಿಯಿತು. ಆತನ ಸಹೋದರ ಮರಣ ಹೊಂದಿದ ಸಂದರ್ಭದಲ್ಲೂ ಆತನಿಗೆ ಅಂತ್ಯ ಸಂಸ್ಕಾರಕ್ಕೆ ಭಾಗಿಯಾಗಲು ಅನುಮತಿ ದೊರೆತಿರಲಿಲ್ಲ. ಇವೆಲ್ಲವೂ ನಡೆಯುವಷ್ಟರಲ್ಲಿ ಆತ ಸುಮಾರು 14 ವರ್ಷ ಜೈಲು ವಾಸ ಅನುಭವಿಸಿದ್ದನು. ಆತ ಬಳಿಕ ಕ್ಷಮಾದಾನ ಅರ್ಜಿ ಸಲ್ಲಿಸಲು ನಿರ್ಧರಿಸಿದನು.
ಆದ್ದರಿಂದ, ಜೈಲಿನ ಅಧಿಕಾರಿಗಳು ರಾಜ್ಯ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಕಳೆದ ವರ್ಷ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದರು. ಜನವರಿ 28 ರಂದು ನ್ಯಾಯಮೂರ್ತಿಗಳಾದ ಕೌಶಲ್ ಜಯೇಂದ್ರ ಠಾಕರ್ ಮತ್ತು ಗೌತಮ್ ಚೌಧರಿ ಅವರ ವಿಭಾಗೀಯ ಪೀಠವು ಆತನನ್ನು ನಿರಪರಾಧಿ ಎಂದು ಘೋಷಿಸಿತು. ಮೂರು ದಿನಗಳ ತಡವಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹಾಗೆಯೇ ಮಹಿಳೆಯ ಖಾಸಗಿ ಭಾಗಗಳಲ್ಲಿ ಯಾವುದೇ ಗಾಯಗಳಿಲ್ಲ ಎಂಬುವ ಎಫ್ಐಆರ್ ಅಂಶವನ್ನು ಕೂಡಾ ನ್ಯಾಯಾಲಯ ಗಮನಿಸಿದೆ. ಭೂ ವಿವಾದವ ಕಾರಣದಿಂದ ಮಹಿಳೆಯ ಪತಿ ಮತ್ತು ಅತ್ತೆ ಈ ದೂರನ್ನು ನೀಡಿದ್ದಾರೆ. ಆಕೆ ಈ ದೂರು ನೀಡಿಲ್ಲ ಎಂಬುದನ್ನು ಪರಿಶೀಲಿಸಿ ವಿಷ್ಣುವನ್ನು ನಿರಪರಾಧಿ ಎಂದು ಘೋಷಿಸಿದೆ. ಆದರೆ ಅದಾಗಲೇ ಆತ ತನ್ನ 20 ವರ್ಷಗಳ ಜೀವನವನ್ನು ಜೈಲಿನಲ್ಲಿ ಕಳೆದಾಗಿತ್ತು.
"ಕೆಲವೇ ದಿನಗಳಲ್ಲಿ ಆತನ ಬಿಡುಗಡೆ ಆದೇಶ ಬರುವ ನಿರೀಕ್ಷೆಯಲ್ಲಿ ನಾವಿದ್ದೇವೆ. ಆತ ಹೊರಹೋದ ಬಳಿಕ ಒಂದು ಡಾಬಾವನ್ನು ತೆರದು ಹೊಸ ಜೀವನ ಪ್ರಾರಂಭಿಸಲು ಯೋಜಿಸಿದ್ದಾನೆ'' ಎಂದು ಆಗ್ರಾ ಕೇಂದ್ರ ಕಾರಾಗೃಹದ ಹಿರಿಯ ಅಧೀಕ್ಷಕ ವಿ.ಕೆ.ಸಿಂಗ್ ಹೇಳಿದ್ದಾರೆ.