ಬೆಂಗಳೂರು, ಮಾ 02 (DaijiworldNews/MS): ’ಸ್ವಘೋಷಿತ ಚೌಕಿದಾರ ಮೋದಿಯವರು ನಿಜವಾದ ಚೌಕಿದಾರರಲ್ಲ, ಬದಲಿಗೆ ಜನಸಾಮಾನ್ಯರ ಪಾಲಿನ ’ ಕೆಟ್ಟ ಗ್ರಹಚಾರ ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಆಡಳಿತ ವೈಖರಿ ಬಗ್ಗೆ ಟ್ವೀಟ್ ಮೂಲಕ ಅಸಮಧಾನ ವ್ಯಕ್ತಪಡಿಸಿರುವ ದಿನೇಶ್ ಗುಂಡೂರಾವ್, ’ಚೇಳಿಗೆ ಯಜಮಾನಿಕೆ ನೀಡಿ ಮನೆಯವರೆಲ್ಲಾ ಕುಟುಕಿಸಿಕೊಳ್ಳುವಂತಾಗಿದೆ ಪ್ರಧಾನಿ ಮೋದಿಯವರ ಆಡಳಿತ. ಇದೊಂದು ರೀತಿ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ. ಸ್ವಘೋಷಿತ 'ಚೌಕಿದಾರ' ಮೋದಿಯವರು ನಿಜವಾದ 'ಚೌಕಿದಾರ'ರಲ್ಲ. ಬದಲಿಗೆ ಜನಸಾಮಾನ್ಯರ ಪಾಲಿನ 'ಕೆಟ್ಟ ಗ್ರಹಚಾರ'ವಾಗಿದ್ದಾರೆ. ಮೋದಿಯವರ ಅಚ್ಚೇದಿನ್ನ ಸತ್ಯ ಜನರಿಗೆ ಈಗ ಅರಿವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಲೆಯೇರಿಸಿ ಜನರ ಜೇಬು ಖಾಲಿ ಮಾಡುವುದೇ ಕೇಂದ್ರ ಸರ್ಕಾರದ ಒಂದಂಶದ ಕಾರ್ಯಕ್ರಮವಿದ್ದಂತೆ ಭಾಸವಾಗುತ್ತಿದೆ. ಒಂದೇ ತಿಂಗಳ ಅವಧಿಯಲ್ಲಿ 4 ಬಾರಿ LPG ಬೆಲೆಯೇರಿಕೆಯಾಗಿದೆ. ಒಂದೊಂದು ರೂಪಾಯಿಗೂ ಪರಿತಪಿಸುತ್ತಿರುವ ಬಡಜನತೆ ಈ ಬೆಲೆಯೇರಿಕೆ ತಾಪ ಸಹಿಸಿಕೊಳ್ಳಲು ಹೇಗೆ ಸಾಧ್ಯ? ಈ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತಾದರೂ ಸಂವೇದನೆ ಬೇಡವೆ? ಎಂದು ಟ್ವೀಟ್ ಮಾಡಿದ್ದಾರೆ.
ಹೊಟ್ಟೆ-ಬಟ್ಟೆ ಕಟ್ಟಿ ಜೀವನ ನಡೆಸುತ್ತಿರುವ ಜನ ಈ ಸರ್ಕಾರದ ದುಡ್ಡಿನ ದುರಾಸೆಗೆ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಬೆಲೆಯೇರಿಕೆಯಿಂದ ದುಡಿದ ಹಣ ಉಳಿಸುವುದಿರಲಿ, ತಿಂಗಳ ಸಂಸಾರ ನಡೆಸುವುದೂ ಕಷ್ಟವಾಗಿದೆ. ಮಾತಲ್ಲೇ ಮಂಟಪ ಕಟ್ಟುವ ಬಣ್ಣದ ಮಾತುಗಳು ಜನರ ಹೊಟ್ಟೆ ತುಂಬಿಸುವುದಿಲ್ಲ. ಈ ಸತ್ಯವನ್ನು ಮೋದಿಯವರು ಇನ್ನಾದರೂ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.