ಹತ್ರಾಸ್, ಮಾ.02 (DaijiworldNews/HR): 2018ರ ಜುಲೈನಲ್ಲಿ ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದ ಅಮರೀಶ್ ಶರ್ಮಾ ಎನ್ನುವವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಈ ಸಂಬಂಧ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾತನಾಡಿರುವ ಹತ್ರಾಸ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್ಪಿ) ವಿನೀತ್ ಜೈಸ್ವಾಲ್, "ಗೌರವ್ ಶರ್ಮಾ ಹಾಗೂ ಆತನ ಸ್ನೇಹಿತರು ಅಮರೀಶ್ ಶರ್ಮಾ ಎನ್ನುವವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಈ ವಿಚಾರ ನೋಜಲಪುರ್ ಗ್ರಾಮದಲ್ಲಿರುವ ಸಾಸ್ನಿ ಪೊಲೀಸ್ ಠಾಣೆಯಿಂದ ಸೋಮವಾರ ನಡೆದಿದೆ" ಎಂದು ತಿಳಿಸಿದ್ದಾರೆ.
ಇನ್ನು ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಮತ್ತು ವಿಚಾರಣೆ ನಡೆಸಲು ವಿಶೇಷ ತಂಡ ರಚಿಸಲಾಗಿದ್ದು, ಪ್ರಕರಣ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
2018ರ ಜುಲೈನಲ್ಲಿ ಗೌರವ್ ಶರ್ಮಾ ಎಂಬವರು ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಗೌರವ್ ಒಂದು ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದು, ಅದಾದ ಬಳಿಕ ಎರಡೂ ಕುಟುಂಬಗಳ ನಡೆವೆ ಜಗಳ ನಡೆಯುತ್ತಲೇ ಇತ್ತು ಎನ್ನಲಾಗಿದೆ.
ಇನ್ನು "ಸೋಮವಾರದಂದು ಆರೋಪಿಯ ಹೆಂಡತಿ ಮತ್ತು ಚಿಕ್ಕಮ್ಮ ಹಾಗೂ ಸಂತ್ರಸ್ತ ಅಮರೀಶ್ ಅವರ ಇಬ್ಬರು ಮಕ್ಕಳು ಊರಿನ ದೇವಾಲಯಕ್ಕೆ ತೆರಳಿದ್ದು, ಈ ವೇಳೆ ಎರಡೂ ಗುಂಪಿನವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಸ್ವಲ್ಪ ಸಮಯದ ಬಳಿಕ ಅಮರೀಶ್ ಹಾಗೂ ಗೌರವ್ ಸ್ಥಳಕ್ಕೆ ಬಂದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅಮರೀಶ್ ಅವರಿಗೆ ಗೌರವ್ ಗುಂಡು ಹಾರಿಸಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಗಾಯಾಳು ಅಮರೀಶ್ ಮೃತಪಟ್ಟಿದ್ದಾರೆ" ಎಂದು ವರದಿಯಾಗಿದೆ.