ಹರಿಯಾಣ, ಮಾ 02 (DaijiworldNews/MS): ಹರಿಯಾಣದಲ್ಲಿ ಈ ಹಿಂದೆ ಪ್ರತಿ ಲೀಟರ್ ಹಾಲಿನ ದರ 55 ರಿಂದ 60ರೂ. ಇದ್ದು ಅದು ಸೋಮವಾರದಿಂದ 100 ರೂ.ಗೆ ಏರಿಕೆಯಾಗಿದೆ.
ಅಶ್ಚರ್ಯವಾದರೂ ಇದನ್ನು ನಂಬಲೇಬೇಕು. ಯಾಕೆಂದರೆ ಕೇಂದ್ರ ಸರ್ಕಾದದ ಕೃಷಿ ಕಾನೂನುಗಳನ್ನು ವಿರೋಧಿಸಿ ಹಾಗೂ ತೈಲ ಬೆಲೆ ಏರಿಕೆ ವಿರೋಧಿಸಿ ಇನ್ನು ಮುಂದೆ ಪ್ರತಿ ಲೀಟರ್ ಹಾಲನ್ನು 100ರೂ.ಗೆ ಮಾರಾಟ ಮಾಡುವಂತೆ ಅಲ್ಲಿನ ರೈತರು ನಿರ್ಧರಿಸಿದ್ದಾರೆ. ಸಹಕಾರ ಸಂಘಗಳ ಮೂಲಕ ಸರ್ಕಾರ ಖರೀದಿಸುವ ಹಾಲಿನ ಬೆಲೆಯನ್ನು ಲೀಟರ್ ಗೆ 100 ರೂ. ಮಾರಾಟ ಮಾಡುವಂತೆ ಅಲ್ಲಿನ ಖಾಫ್ ಮಹಾಪಂಚಾಯತ್ ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಇತ್ತೀಚೆಗೆ ಗುಜರಾತ್ ಹಾಲು ಮಾರುಕಟ್ಟೆ ಸಹಕಾರ ಸಂಘಗಳು ಪ್ರತಿ ಲೀಟರ್ ಹಾಲಿನ ದರದಲ್ಲಿ 2ರೂ. ಹೆಚ್ಚಳ ಮಾಡಿತ್ತು. ಆದಾದ ಬಳಿಕ ಈಗ ಹರಿಯಾಣ ರೈತರು ಬೆಲೆ ಏರಿಕೆಗೆ ಮುಂದಾಗಿರುವುದು ಜನ ಸಾಮಾನ್ಯರನ್ನು ಆತಂಕಕ್ಕೀಡು ಮಾಡಿದೆ.
ಇನ್ನೊಂದೆಡೆ ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ ಸುಮಾರು 90ಕ್ಕೂ ಹೆಚ್ಚು ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರು ಹಂತ ಹಂತವಾಗಿ ತಮ್ಮ ಪ್ರತಿಭಟನೆಯನ್ನು ಹೆಚ್ಚಿಸುತ್ತಿದ್ದಾರೆ. ವೆಬಿನಾರ್ ಒಂದರಲ್ಲಿ ಕೃಷಿ ಕಾಯ್ಧೆಗಳನ್ನು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದು, ಕೃಷಿ ಕ್ಷೇತ್ರದಲ್ಲಿ ಖಾಸಗಿಯವರ ಭಾಗೀದಾರಿಕೆ ಹೆಚ್ಚಾಗಬೇಕು ಎಂದು ಹೇಳಿದ್ದಾರೆ.