ಬೆಂಗಳೂರು, ಮಾ.02 (DaijiworldNews/HR): "ಆಂತರಿಕವಾಗಿ ಚರ್ಚೆಯಾಗಬೇಕಿದ್ದ ಪಕ್ಷದ ಸಮಸ್ಯೆಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದ್ದು, ಇದರಿಂದ ಪಕ್ಷದ ಕಾರ್ಯಕರ್ತರ ಮಾನಸಿಕ ಸ್ಥೈರ್ಯ ಕುಗ್ಗುತ್ತದೆ" ಎಂದು ಕಾಂಗ್ರೆಸ್ನ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಜಿ-23 ತಂಡದ ಸದಸ್ಯರು ಫೆ. 27ರಂದು ಕಾಶ್ಮೀರದಲ್ಲಿ ಸಮಾವೇಶ ನಡೆಸಿದ್ದು, ಇದಕ್ಕೆ ಮೊಯ್ಲಿ ಹಾಜರಾಗಿರಲಿಲ್ಲ. ಬಳಿಕ ಗೈರಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, "ನಾನು ಜಿ-23 ಗುಂಪಿನಿಂದ ದೂರ ಉಳಿಯುತ್ತಿದ್ದೇನೆ" ಎಂದರು.
ಇನ್ನು ಪಕ್ಷದಲ್ಲಿ ಆಗುವ ಭಿನ್ನಾಭಿಪ್ರಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, "ರಾಹುಲ್ ಅವರೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಿಂದಿರುಗಬೇಕು" ಎಂದು ಆಗ್ರಹಿಸಿದ್ದಾರೆ.
"ಸೋನಿಯಾ ಗಾಂಧಿ ಮತ್ತು ರಾಹುಲ್ ಅವರ ನಾಯಕತ್ವಕ್ಕೆ ಸವಾಲು ಎಂದು ವ್ಯಾಖ್ಯಾನಿಸಲಾಗಿದ್ದು, ಅವೆಲ್ಲವು ನಿಜವಲ್ಲ. ನಾವೆಲ್ಲರೂ ಅವರೊಂದಿಗೆ ಇದ್ದೇವೆ ಮತ್ತು ನಾವು ಅವರಿಗೆ ವಿರೋಧಿಯಲ್ಲ" ಎಂದು ಹೇಳಿದ್ದಾರೆ.
"ಜಮ್ಮುವಿನಲ್ಲಿ ನಡೆದ ಜಿ -23 ಸಭೆ ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿ ನಿವೃತ್ತರಾದ ಗುಲಾಮ್ ನಬಿ ಆಜಾದ್ ಅವರನ್ನು ಸನ್ಮಾನಿಸಲು ಆಯೋಜಿಸಲಾಗಿತ್ತು" ಎಂದು ತಿಳಿಸಿದ್ದಾರೆ.